ಗದಗ: ರಾಕಿಂಗ್ ಸ್ಟಾರ್ ಯಶ್ ಅವರ ಬರ್ತಡೇ ಬ್ಯಾನರ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಮೂವರು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ. ಈ ಅವಘಡದಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.
ಇದೀಗ ಘಟನೆ ಹಿನ್ನೆಲೆ ನಟ ರಾಕಿಂಗ್ ಸ್ಟಾರ್ ಯಶ್ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಬೇಕೆಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಯಶ್ ಗ್ರಾಮಕ್ಕೆ ಬರಲೇಬೇಕು, ಗಾಯಾಳುಗಳನ್ನು ಹಾಗೂ ಮೃತ ಯುವಕರ ಕುಟುಂಬದವರನ್ನು ಯಶ್ ಭೇಟಿಯಾಗಬೇಕೆಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರ ಬರ್ತಡೇ ಬ್ಯಾನರ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಹನುಮಂತ ಹರಿಜನ(21), ಮುರಳಿ ನಡುವಿನಮನೆ(20), ನವೀನ್(19) ಮೃತಪಟ್ಟಿದ್ದಾರೆ. ಮಂಜುನಾಥ, ದೀಪಕ್, ಪ್ರಕಾಶ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ತಡರಾತ್ರಿ ನೀಲಗಿರಿ ತೋಪಿನಲ್ಲಿ ಯಶ್ ಬರ್ತಡೇ ಬ್ಯಾನರ್ ಕಟ್ಟುವಾಗ ದುರಂತ ಸಂಭವಿಸಿದೆ. ಯಶ್ ಅವರ ಅಭಿಮಾನಿಗಳಾಗಿದ್ದ ಯುವಕರು ನೆಚ್ಚಿನ ನಟನ ಹುಟ್ಟುಹಬ್ಬದ ಅಂಗವಾಗಿ ಬೃಹತ್ ಬ್ಯಾನರ್ ಕಟೌಟ್ ಕಟ್ಟಿ ಮೇಲೆತ್ತಿ ನಿಲ್ಲಿಸುವಾಗ ಕರೆಂಟ್ ವೈರ್ ತಗುಲಿ ವಿದ್ಯುತ್ ಪ್ರವಹಿಸಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ.