ಟೊಮೆಟೊ ಸೇರಿದಂತೆ ತರಕಾರಿಗಳ ಬೆಲೆ ಏರಿಕೆಯಿಂದ ಗ್ರಾಹಕರು ಈಗಾಗಲೇ ತತ್ತರಿಸಿದ್ದಾರೆ. ಆದರೆ, ಇಲ್ಲೊಂದೆಡೆ ಸಿಗುವ ದುಬಾರಿ ತರಕಾರಿ ಬೆಲೆ ಕೇಳಿದ್ರೆ ಖಂಡಿತಾ ನೀವು ಶಾಕ್ ಆಗ್ತೀರಿ.
ಉತ್ತರ ಪ್ರದೇಶದ ಪಿಲಿಭಿತ್‌ನ ಕಾಡುಗಳಲ್ಲಿ ಮಳೆಗಾಲದಲ್ಲಿ ಕಾಣಸಿಗುವ ವಿಶಿಷ್ಟವಾದ ಮತ್ತು ದುಬಾರಿ ತರಕಾರಿಯನ್ನು ʼಕಟ್ರುವಾʼ ಎಂದು ಕರೆಯಲಾಗುತ್ತದೆ. ಈ ತರಕಾರಿಯನ್ನು ಸಾಲ್ ಮರಗಳ ಬೇರುಗಳಲ್ಲಿ ಬೆಳೆಯಲಾಗುತ್ತದೆ. ಮಟನ್ ಗಿಂತಲೂ ಹೆಚ್ಚು ವೆಚ್ಚವಾಗುವ ಈ ತರಕಾರಿಯು ಅದರ ಸಂರಕ್ಷಿತ ಅರಣ್ಯ ಸ್ಥಿತಿಯ ಕಾರಣದಿಂದಾಗಿ ಕೊಯ್ಲು ನಿಷೇಧಿಸಲಾಗಿದೆ. ಆದರೂ ʼಕಟ್ರುವಾʼ ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ.
ಕಟ್ರುವಾ, ಒಂದು ರೀತಿಯ ಕಾಡು ಅಣಬೆಯಾಗಿದೆ. ಹುಲಿಗಳು ಹೆಚ್ಚಾಗಿ ಸಂಚರಿಸುವ ಪಿಲಿಭಿತ್‌ನ ದಟ್ಟವಾದ ಕಾಡಿನಲ್ಲಿ ಅರಳುತ್ತವೆ. ಸ್ಥಳೀಯ ಗ್ರಾಮಸ್ಥರು ಮುಂಜಾನೆ ಅರಣ್ಯದಿಂದ ರಹಸ್ಯವಾಗಿ ಅಗೆದು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಅಕ್ರಮದ ಹೊರತಾಗಿಯೂ ಈ ತರಕಾರಿ ಹೆಚ್ಚು ಬೇಡಿಕೆಯಲ್ಲಿದೆ. ರೂ. 1,000 ರಿಂದ 1,500 ರೂ.ವರೆಗೆ ಬೆಲೆ ಪಡೆಯುತ್ತದೆ.
ವೈಲ್ಡ್ ಲೈಫ್ ಕ್ರೈಂ ಕಂಟ್ರೋಲ್ ಬ್ಯೂರೋದ ಎಚ್ಚರಿಕೆಯ ಮೇರೆಗೆ ಅರಣ್ಯ ಇಲಾಖೆಯು ಹೆಚ್ಚಿನ ನಿಗಾ ವಹಿಸಿದ್ದು, ಕಾಡಿನಿಂದ ಕಟ್ರುವಾವನ್ನು ತರುವುದು ಸವಾಲಿನ ಸಂಗತಿಯಾಗಿದೆ.
ಕಟ್ರುವಾವನ್ನು ಅಡುಗೆಗೆ ಸಿದ್ಧಪಡಿಸುವ ಮುನ್ನ ಚೆನ್ನಾಗಿ ಶುಚಿಗೊಳಿಸಬೇಕು. ಇದು ಮಾಂಸಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ನಂತರ ತರಕಾರಿಯನ್ನು ತುಂಡುಗಳಾಗಿ ಕತ್ತರಿಸಲಾಗುತ್ತದೆ ಅಥವಾ ಸಂಪೂರ್ಣವಾಗಿ ಬೇಯಿಸಲಾಗುತ್ತದೆ. ಚಿಕನ್ ಅಥವಾ ಮಟನ್‌ನಂತೆಯೇ, ಕಟ್ರುವಾಕ್ಕೆ ಅರಿಶಿನ, ಮೆಣಸು, ಚಿಕನ್ ಮಸಾಲಾ, ಈರುಳ್ಳಿ ಪೇಸ್ಟ್, ಗರಂ ಮಸಾಲಾ ಒಳಗೊಂಡಂತೆ ಮಾಂಸಕ್ಕೆ ಬೇಕಾಗುವ ಮಸಾಲೆಗಳು ಬೇಕಾಗುತ್ತದೆ. ಸಸ್ಯಾಹಾರಿಗಳು ಮಟನ್ ಗೆ ಪರ್ಯಾಯವಾಗಿ ಇದನ್ನು ಸೇವಿಸಬಹುದು.
ಪಿಲಿಭಿತ್‌ನ ಮಹೋಫ್ ಅರಣ್ಯದಲ್ಲಿ ಪ್ರಧಾನವಾಗಿ ಕಂಡುಬಂದರೂ, ಕಟ್ರುವಾದ ಜನಪ್ರಿಯತೆಯು ಪ್ರದೇಶವನ್ನು ಮೀರಿ ವಿಸ್ತರಿಸಿದೆ. ಅರಣ್ಯ ಇಲಾಖೆ ಮತ್ತು ಪಿಲಿಭಿತ್ ಹುಲಿ ರಕ್ಷಿತಾರಣ್ಯವು ಮೀಸಲು ಪ್ರದೇಶಕ್ಕೆ ಅನಧಿಕೃತ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ಕಟ್ರುವಾವನ್ನು ಕೊಯ್ಲು ಮಾಡಲು ಅಕ್ರಮವಾಗಿ ಕಾಡಿಗೆ ಪ್ರವೇಶಿಸುವಂತಿಲ್ಲ ಎಂಬ ಎಚ್ಚರಿಕೆ ನೀಡಲಾಗಿದೆ.