ಬೆಂಗಳೂರು: ಬ್ಯಾಂಕ್ ಸಿಬ್ಬಂದಿಯಿಂದ ಮನೆ ಜಪ್ತಿ ಮಾಡುವ ಸಂದರ್ಭದಲ್ಲಿ ಎಡವಟ್ಟು ನಡೆದಿದ್ದು, ಮನೆಗೆ ಬೀಗ ಜಡಿಯುವ ಬರದಲ್ಲಿ ಯುವಕನೊಬ್ಬನನ್ನು ಮನೆಯಲ್ಲಿಯೇ ಲಾಕ್ ಮಾಡಿರುವ ಘಟನೆ ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ ನಡೆದಿದೆ.
ಮನೆ ಜಪ್ತಿ ಮಾಡುವ ವೇಳೆ ಯುವಕ ಬಾಡಿಗೆ ಮನೆಯಲ್ಲಿ ಮಲಗಿದ್ದ. ಬ್ಯಾಂಕ್ ಸಿಬ್ಬಂದಿಗಳು ಬಂದು ಇಡೀ ಮನೆ ಲಾಕ್ ಮಾಡಿರುವುದು ಆತನಿಗೆ ಗೊತ್ತಾಗಿಲ್ಲ. ಹೀಗಾಗಿ ಮನೆಯೊಳಗೆಯೇ ಆತ ಲಾಕ್ ಆಗಿದ್ದಾನೆ.
ಪುಟ್ಟಪ್ಪ ಹಾಗೂ ಗಾಯತ್ರಿ ಎಂಬುವವರು ತುಮಕೂರಿನ ವೀರಶೈವ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ 2 ಕೋಟಿ ರೂಪಾಯಿ ಸಾಲ ಮಾಡಿ, ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ 3 ಅಂತಸ್ತಿನ ಮನೆ ಕಟ್ಟಿದ್ದರು. ಒಂದು ಅಂತಸ್ತಿನಲ್ಲಿ ಮನೆ ಮಾಲೀಕರು ಉಳಿದ ಎರಡು ಅಂತಸ್ತನ್ನು ಬಾಡಿಗೆಗೆ ನೀಡಿದ್ದರು.
ಬ್ಯಾಂಕ್ ಸಾಲ ತೀರಿಸದ ಕಾರಣಕ್ಕೆ ಬ್ಯಾಂಕ್ ನವರು ಕೋರ್ಟ್ ನಿಂದ ಅನುಮತಿ ಪಡೆದು ಲೋನ್ ರಿಕವರಿಗೆ ಬಂದಿದ್ದಾರೆ. ಕಟ್ಟಡದ ಮೂರು ಮನೆಗಳಿಗೂ ಬೀಗ ಜಡಿದಿದ್ದಾರೆ. ಮನೆ ಜಪ್ತಿ ಮಾಡುವ ವೇಳೆ ಬಾಡಿಗೆ ಮನೆಯಲ್ಲಿ ಮಲಗಿದ್ದ ಬಾಡಿಗೆದಾರ ಯುವಕ ಮನೆಯೊಳಗೆ ಲಾಕ್ ಆಗಿದ್ದಾನೆ.
ಮನೆಯಲ್ಲಿ ಯಾರಿದ್ದಾರೆ, ಇಲ್ಲವೇ ಎಂಬುದನ್ನೂ ನೋಡದೇ ಬ್ಯಾಂಕ್ ಸಿಬ್ಬಂದಿ ಲಾಕ್ ಮಾಡಿ ತೆರಳಿದ್ದಾರೆ. ಯುವಕನ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಬ್ಯಾಂಕ್ ಸಿಬ್ಬಂದಿಗಳು ತಮ್ಮ ಮಗನನ್ನು ಮನೆಯೊಳಗೆ ಲಾಕ್ ಮಾಡಿ ಮನೆ ಸೀಜ್ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಸಧ್ಯ ಯುವಕನನ್ನು ಮನೆಯಿಂದ ಹೊರತೆಗೆದಿದ್ದಾರೆ.