ಬೆಂಗಳೂರು: ಗ್ರಾಹಕರ ಖಾತೆಗಳಲ್ಲಿದ್ದ 1.89 ಕೋಟಿ ರೂ. ಬಳಸಿಕೊಂಡ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಗಣೇಶ್ ಬಾಬು ಮತ್ತು ಕಚೇರಿ ಸಹಾಯಕ ಜಿತೇಂದ್ರ ಅವರ ವಿರುದ್ಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜೂನ್ 3ರಿಂದ ಜುಲೈ 17ರ ಅವಧಿಯಲ್ಲಿ ಇವರಿಬ್ಬರೂ ಸೇರಿ ಗ್ರಾಹಕರ ಖಾತೆಗಳಿಂದ ಆರ್ಟಿಜಿಎಸ್ ಮೂಲಕ ಹಂತ ಹಂತವಾಗಿ ಕೆಲವು ಖಾತೆಗಳಿಗೆ 1.89 ಕೋಟಿ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಗುಜರಾತ್ ಮೂಲದ ಆನ್ಲೈನ್ ಜೂಜು ಮತ್ತು ಕಾಸಿನೋಗಳಿಗೆ ಈ ಹಣ ಬಳಸಿಕೊಂಡಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲಿಗೆ ಫಲಾನುಭವಿಗಳಿಗೆ ಸರ್ಕಾರದಿಂದ ಹಣ ವರ್ಗಾವಣೆ ಮಾಡಲಾಗಿದೆ. ಖಾತೆಗಳಲ್ಲಿ ಹಣ ಜಮಾ ಆಗಿರುವ ಬಗ್ಗೆ ಗ್ರಾಹಕರು 3-4 ದಿನಗಳ ಹಿಂದೆ ಬ್ಯಾಂಕಿಗೆ ಬಂದು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ತಮ್ಮ ಖಾತೆಗಳಲ್ಲಿ ಹಣ ಇಲ್ಲದಿರುವುದು ಗೊತ್ತಾಗಿದೆ. ಅದಕ್ಕಿಂತ ಮೊದಲೇ ಬ್ಯಾಂಕ್ ವ್ಯವಸ್ಥಾಪಕ ಮತ್ತು ಕಚೇರಿ ಸಹಾಯಕ ಕೆಲಸಕ್ಕೆ ಬಾರದೆ ತಲೆಮರೆಸಿಕೊಂಡಿದ್ದಾರೆ. ಬ್ಯಾಂಕ್ ಮುಂದೆ ಗ್ರಾಹಕರು ಪ್ರತಿಭಟನೆ ನಡೆಸಿ ಚನ್ನರಾಯಪಟ್ಟಣ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಇವರಿಬ್ಬರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ನಾಪತ್ತೆಯಾಗಿರುವ ಅವರ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ.