
ಬೆಂಗಳೂರು: ಲಾಕರ್ ನಲ್ಲಿ ಹಣ, ಚಿನ್ನಾಭರಣವಿಟ್ಟರೆ ಸುರಕ್ಷಿತ ಎಂಬ ಕಾರಣ ಬಹುತೇಕ ಗ್ರಾಹಕರು ಬ್ಯಾಂಕ್ ಲಾಕರ್ ಗಳಲ್ಲಿ ಚಿನ್ನಾಭರಣ, ನಗದು ಹಣ, ದಾಖಲೆ ಪತ್ರಗಳನ್ನು ಇಡುವುದನ್ನು ಗಮನಿಸಿದ್ದೇವೆ. ಹೀಗೆ ಇಟ್ಟಿರುವ ಹಣ, ಚಿನ್ನಾಭರಣಗಳು ನಾಪತ್ತೆಯಾಗುವ ಕೆಲ ಪ್ರಕರಣಗಳನ್ನು ಕೇಳಿರುತೇವೆ. ಅಂತಂದೇ ಘಟನೆಯೊಂದು ಬೆಳಕಿಗೆ ಬಂದಿದೆ.
ಬ್ಯಾಂಕ್ ಲಾಕರ್ ನಲ್ಲಿಟ್ಟಿದ್ದ ಕಂತೆ ಕಂತೆ ಹಣ ಗೆದ್ದಲು ಹಿಡಿದು ಸಂಪೂರ್ಣವಾಗಿ ನಾಶವಾಗಿರುವ ಘಟನೆ ಮಂಗಳೂರಿನ ಕೋಟೆಕಾರ್ ಕೆನರಾಬ್ಯಾಂಕ್ ನಲ್ಲಿ ನಡೆದಿದೆ.
ಸಫಲ್ ಎಂಬುವವರು ಮಂಗಳೂರಿನ ಕೋಟೆಕಾರ್ ನಲ್ಲಿರುವ ಕೆನರಾ ಬ್ಯಾಂಕ್ ನಲ್ಲಿ ಲಾಕರ್ ನಲ್ಲಿ 8 ಲಕ್ಷ ರೂಪಾಯಿ ಇಟ್ಟಿದ್ದರಂತೆ. 6 ತಿಂಗಳ ಬಳಿಕ ಔಷಧಿಗಾಗಿ ಹಣ ತೆಗೆಯಲೆಂದು ಬ್ಯಾಂಕ್ ಗೆ ಹೋಗಿ ಲಾಕರ್ ಓಪನ್ ಮಾಡಿದರೆ ಹಣವೆಲ್ಲ ಪುಡಿ ಪುಡಿಯಾಗಿವೆ.
ಬ್ಯಾಂಕ್ ನವರೇ ಖುದ್ದು ಲಾಕರ್ ಓಪನ್ ಮಾಡಿದ್ದಾರೆ. ಲಾಕರ್ ಮಳೆ ನೀರಿನಲ್ಲಿ ನೆಂದ ಸ್ಥಿತಿಯಲ್ಲಿದೆ. ಅದರಲ್ಲಿಟ್ಟಿದ್ದ 8 ಲಕ್ಷ ಹಣ ಗೆದ್ದು ಹಿಡಿದು ಚೂರು ಚೂರಾಗಿದೆ. ಇದನ್ನು ಕಂಡ ಗ್ರಾಹಕ ಸಫಲ್ ಕಂಗಾಲಾಗಿದ್ದಾರೆ. ಕಷ್ಟಪಟ್ಟು ದುಡಿದು ಕೂಡಿಟ್ಟಿದ್ದ ಹಣ ಗೆದ್ದಲು ತಿಂದು ನಾಶವಾಗಿದ್ದು, ಬ್ಯಾಂಕ್ ಸಿಬ್ಬಂದಿಗಳ ಬೇಜವಾಬ್ದಾರಿಗೆ ಗರಂ ಆಗಿದ್ದಾರೆ.
ಸಫಲ್ ಕುಟುಂಬ ಬೆಂಗಳೂರಿನ ಕೆನರಾ ಬ್ಯಾಂಕ್ ಪ್ರಧಾನ ಕಚೇರಿಗೆ ಆಗಮಿಸಿ ದೂರು ನೀಡಿದೆ. ಹಳೆ ಕಟ್ಟಡ, ನಿರ್ವಹಣೆಯ ಕೊರತೆಯಿಂದಾಗಿ ಲಾಕರ್ ನಟ್ಟಿದ್ದ ಹಣ ಹಾಳಾಗಿದ್ದು, ಸಮಸ್ಯೆ ಸರಿಪಡಿಸಿಕೊಡುವಂತೆ ಮನವಿ ಮಾಡಿದ್ದಾರೆ.