ಮಾಹಿತಿ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಹಲವಾರು ಬ್ಯಾಂಕಿಂಗ್ ಹಾಗೂ ಬ್ಯಾಂಕೇತರ ಹಣಕಾಸು ಕಂಪನಿಗಳು ಮುಂದಿನ ಕೆಲ ವರ್ಷಗಳಲ್ಲಿ ಉದ್ಯೋಗ ನೇಮಕಾತಿಗೆ ವೇಗವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ.
ಟೀಮ್ಲೀಸ್ ಸರ್ವೀಸಸ್ ನೀಡಿರುವ ಮಾಹಿತಿಯ ಪ್ರಕಾರ ಮುಂದಿನ ಮೂರು ವರ್ಷಗಳಲ್ಲಿ ಎನ್ಬಿಎಫ್ಸಿ ಹಾಗೂ ಖಾಸಗಿ ಬ್ಯಾಂಕುಗಳು 70 ಸಾವಿರ ಫ್ರೆಶರ್ಗಳನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಬ್ಯಾಂಕಿಂಗ್, ಹಣಕಾಸು ಸೇವೆ ಹಾಗೂ ವಿಮಾ ವಲಯಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಸುಮಾರು 25 ಪ್ರತಿಶತ ಎಂಟ್ರಿ ಲೆವಲ್ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಟೆಕ್ ವಲಯಗಳಲ್ಲಿ ಹೆಚ್ಚುತ್ತಿರುವ ಸಂಬಳ ಹಾಗೂ ರಿಯಲ್ ಎಸ್ಟೇಟ್ ವಲಯದಲ್ಲಿ ಕಾಣುತ್ತಿರುವ ಚೇತರಿಕೆಯು ಬಿಎಫ್ಎಸ್ಐ ಮೇಲಿನ ಸಕಾರಾತ್ಮಕ ಪರಿಣಾಮ ಬೀರಬಹುದು ಎಂಬ ನಿರೀಕ್ಷೆಯಿದೆ ಎಂದು ಟೀಂಲೀಸ್ ಸರ್ವೀಸಸ್ ಮುಖ್ಯಸ್ಥ ಅಮಿತ್ ವಡೇರಾ ಹೇಳಿದ್ದಾರೆ.
ಈ ಬೆಳವಣಿಗೆಯು ಬಿಎಫ್ಎಸ್ಐ ವಲಯದ ಮೇಲೆ ಪರಿಣಾಮ ಬೀರಲಿದ್ದು, ಇದರಿಂದಾಗಿ ಫ್ರೆಶರ್ಗಳನ್ನು ಹೆಚ್ಚೆಚ್ಚು ನೇಮಕ ಮಾಡಿಕೊಳ್ಳಲಾಗುತ್ತೆ ಎಂದು ವಡೇರಾ ಹೇಳಿದ್ದಾರೆ.
ಕಳೆದ ಆರು ತಿಂಗಳಲ್ಲಿ ಬಿಎಫ್ಎಸ್ಐ ನೇಮಕಾತಿ ವಲಯದಲ್ಲಿ 25 ಪ್ರತಿಶತ ಏರಿಕೆ ಕಂಡಿದೆ ಹಾಗೂ ಕಂಪನಿಗಳು ಫ್ರೆಶರ್ಗಳ ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸಲು ಹೆಚ್ಚಿನ ಹೂಡಿಕೆ ಮಾಡುತ್ತಿವೆ ಎನ್ನಲಾಗಿದೆ.
ಭಾರತದ ಅತೀದೊಡ್ಡ ಖಾಸಗಿ ಸಾಲದಾತ ಹೆಚ್ಡಿಎಫ್ಸಿ ಬ್ಯಾಂಕ್ ಮುಂದಿನ ಆರು ತಿಂಗಳಲ್ಲಿ 2500 ಮಂದಿಯನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಯೋಜನೆಯಲ್ಲಿದೆ. ಮುಂದಿನ 2 ವರ್ಷಗಳಲ್ಲಿ 2 ಲಕ್ಷ ಗ್ರಾಮಗಳನ್ನು ತಲುಪುವ ಪ್ಲಾನ್ ಹೆಚ್ಡಿಎಫ್ಸಿಯದ್ದಾಗಿದೆ.
ಅದೇ ರೀತಿ ಐಸಿಐಸಿಐ ಹೋಂ ಫೈನಾನ್ಸ್ 600 ಮಂದಿಯನ್ನು ನೇಮಿಸಿಕೊಳ್ಳುವ ಪ್ಲಾನ್ನಲ್ಲಿದ್ದರೆ ಕೋಟಕ್ ಮಹೀಂದ್ರಾ ಕೂಡ ಇದೇ ರೀತಿಯ ಯೋಜನೆಯನ್ನು ಹಾಕಿಕೊಂಡಿದೆ.