ಕೊರೊನಾ ಸಂಕಷ್ಟದ ನಡುವೆಯೇ ಬೆಲೆ ಏರಿಕೆ ಬಿಸಿ ಕೂಡ ಶ್ರೀಸಾಮಾನ್ಯನ ಜೇಬನ್ನ ಸುಡುತ್ತಿದೆ. ಈ ನಡುವೆ ಬ್ಯಾಂಕ್ಗಳೂ ಸಹ ತಮ್ಮ ಗ್ರಾಹಕರಿಗೆ ಎಟಿಎಂ ವ್ಯವಹಾರಗಳ ಶುಲ್ಕವನ್ನ ಏರಿಕೆ ಮಾಡಿದೆ. ಬ್ಯಾಂಕ್ಗಳು ಎಟಿಎಂನಿಂದ ಹಣ ಡ್ರಾ ಮಾಡುವ ವೇಳೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ಏರಿಕೆ ಮಾಡಿವೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ನಿರ್ದೇಶನವನ್ನ ಆಲಿಸಿ ಬ್ಯಾಂಕ್ಗಳು ಈ ಕ್ರಮ ಕೈಗೊಂಡಿವೆ. ಆರ್ಬಿಐ ಸರಿ ಸುಮಾರು 9 ವರ್ಷಗಳ ಬಳಿಕ ಎಟಿಎಂ ವ್ಯವಹಾರ ಶುಲ್ಕವನ್ನ ಏರಿಕೆ ಮಾಡಿದೆ.
ಆರ್ಬಿಐ ಬ್ಯಾಂಕ್ನಿಂದ ಹಣ ಡ್ರಾ ಮಾಡುವ ನಿಯಮಗಳಲ್ಲಿ ಬದಲಾವಣೆಗಳನ್ನು ತಂದಿದೆ. ಈಗ ನೀವು ಎಟಿಎಂನಿಂದ ಹಣ ಡ್ರಾ ಮಾಡಿದ್ದಕ್ಕೆ ಮೊದಲಿಗಿಂತ ಜಾಸ್ತಿ ಶುಲ್ಕವನ್ನ ಭರಿಸಬೇಕು. ಬ್ಯಾಂಕ್ ಇಂಟರ್ಚೇಂಜ್ ಶುಲ್ಕವನ್ನು ಏರಿಕೆ ಮಾಡುವ ನಿರ್ಧಾರಕ್ಕೆ ಬಂದಿದೆ. ಈ ಸಂಬಂಧ ಸಂಸತ್ತಿಗೆ ಕೇಂದ್ರ ವಿತ್ತ ರಾಜ್ಯ ಸಚಿವ ಭಾಗವತ್ ಕಿಶನ್ರಾವ್ ಕರಾಡ್ ಮಾಹಿತಿ ನೀಡಿದ್ದು, ಆರ್ಬಿಐ 2022ರ ಜನವರಿ 1ನೇ ತಾರೀಖಿನಿಂದ ಬ್ಯಾಂಕುಗಳಿಗೆ ಗ್ರಾಹಕರಿಗೆ ಶುಲ್ಕದ ರೂಪದಲ್ಲಿ 21 ರೂಪಾಯಿಗಳವರೆಗೆ ವಸೂಲಿ ಮಾಡಲು ಅವಕಾಶ ನೀಡಿದೆ. ಪ್ರಸ್ತುತ 20 ರೂಪಾಯಿವರೆಗೆ ಶುಲ್ಕ ವಿಧಿಸಲು ಅವಕಾಶವಿದೆ.
ಶುಲ್ಕವೇ ಇಲ್ಲದೆ ಎಷ್ಟು ಬಾರಿ ಎಟಿಎಂ ವ್ಯವಹಾರ ನಡೆಸಬಹುದು..?
ಆರ್ಬಿಐ ನೀಡಿರುವ ನಿರ್ದೇಶನದ ಪ್ರಕಾರ ಗ್ರಾಹಕರು ತಮ್ಮ ಬ್ಯಾಂಕಿನ ಎಟಿಎಂನಿಂದ ತಿಂಗಳಲ್ಲಿ 5 ಬಾರಿ ಉಚಿತ ವ್ಯವಹಾರ ನಡೆಸಬಹುದಾಗಿದೆ. ಬೇರೆ ಬ್ಯಾಂಕ್ನ ಎಟಿಎಂಗಳಲ್ಲಿ 3 ರಿಂದ 5 ಬಾರಿ ಫೈನಾನ್ಶಿಯಲ್ ಹಾಗೂ ನಾನ್ ಫೈನಾನ್ಶಿಯಲ್ ವ್ಯವಹಾರವನ್ನು ಮಾಡಬಹುದಾಗಿದೆ. ಇದಾದ ಬಳಿಕ ನೀವು ಮಾಡುವ ಪ್ರತಿ ವ್ಯವಹಾರಕ್ಕೂ ಶುಲ್ಕ ಭರಿಸಬೇಕಾಗುತ್ತದೆ.
ಎಟಿಎಂ ವ್ಯವಹಾರಗಳಿಗೆ ಬ್ಯಾಂಕ್ನಿಂದ ಶುಲ್ಕ ವಿಧಿಸಲೇಬೇಕು ಎಂದೇನಿಲ್ಲ. ಅದು ಬ್ಯಾಂಕುಗಳ ಮೇಲೆ ಅವಲಂಭಿತವಾಗಿದೆ. ಬ್ಯಾಂಕ್ನವರು ಬಯಸಿದಲ್ಲಿ ವ್ಯವಹಾರದ ಮಿತಿಯನ್ನ ಹೆಚ್ಚಿಸಬಹುದಾಗಿದೆ ಎಂದು ಸಂಸತ್ತಿನಲ್ಲಿ ಕೇಂದ್ರ ವಿತ್ತ ರಾಜ್ಯ ಸಚಿವ ಭಾಗವತ್ ಕಿಶನ್ ರಾವ್ ಹೇಳಿದ್ದಾರೆ.