
ಚಿಕ್ಕಮಗಳೂರು: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿಯಿಂದಲೇ ಗ್ರಾಹಕರಿಗೆ ವಂಚನೆಯಾಗಿದೆ. ಗ್ರಾಹಕರ ಚಿನ್ನ, ಎಫ್.ಡಿ. ಹಣವನ್ನು ಬ್ಯಾಂಕ್ ಸಿಬ್ಬಂದಿ ದುರುಪಯೋಗಪಡಿಸಿಕೊಂಡ ಆರೋಪ ಕೇಳಿ ಬಂದಿದೆ.
ಗ್ರಾಹಕರು ಬ್ಯಾಂಕಿನಲ್ಲಿಟ್ಟಿದ್ದ ಚಿನ್ನ ಮಾರಾಟ ಮಾಡಿದ್ದಾರೆ. ಎಫ್.ಡಿ. ಹಣ ಡ್ರಾ ಮಾಡಿಕೊಂಡು ಸಿಬ್ಬಂದಿ ಗ್ರಾಹಕರಿಗೆ ವಂಚನೆ ಮಾಡಿದ್ದಾರೆ. ಬೆಂಗಳೂರು ಮುಖ್ಯ ಶಾಖೆ ಅಧಿಕಾರಿಗಳ ಪರಿಶೀಲನೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
141 ಪ್ಯಾಕೆಟ್ ಗಳ ಪೈಕಿ 140 ಪ್ಯಾಕೆಟ್ ಗಳಲ್ಲಿ ನಕಲಿ ಚಿನ್ನ ಕಂಡು ಬಂದಿದೆ. ಗ್ರಾಹಕರ ಚಿನ್ನ ಬೇರೆಡೆ ಮಾರಿದ ಸಿಬ್ಬಂದಿ ನಕಲಿ ಚಿನ್ನ ಇಡುತ್ತಿದ್ದರು. ಚಿಕ್ಕಮಗಳೂರು ನಗರದ ಬೋಳ ರಾಮೇಶ್ವರ ದೇವಾಲಯ ಬಳಿ ಇರುವ ಬ್ಯಾಂಕ್ ಇದಾಗಿದೆ. ಐವರು ಸಿಬ್ಬಂದಿ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಂಕ್ ಮ್ಯಾನೇಜರ್ ಸಂದೀಪ್ ಕೊಲ್ಲೂರಿ, ಪ್ರಶಾಂತ, ನಾರಾಯಣಸ್ವಾಮಿ, ಲಾವಣ್ಯ, ಶ್ವೇತ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಬ್ಯಾಂಕ್ ಆಡಿಟ್ ನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವುದು ಬಹಿರಂಗವಾಗಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರು ಕಚೇರಿ ಮ್ಯಾನೇಜರ್ ದೂರು ನೀಡಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.