ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಸಣ್ಣ ಕಾಫಿ ಅಂಗಡಿಯನ್ನು ಹೊಂದಿರುವ ಪ್ರಭಾಕರ್ ಎಂಬ ಬೆಂಗಳೂರಿನ ನಿವಾಸಿಯೊಬ್ಬರು ಇತ್ತೀಚೆಗೆ ತಮ್ಮ ಖಾತೆಯನ್ನು ಪರಿಶೀಲಿಸಿ ಬೆಚ್ಚಿಬಿದ್ದಿದ್ದಾರೆ. ಅವರ ಖಾತೆಯಲ್ಲಿ ಬರೋಬ್ಬರಿ 999 ಕೋಟಿ ರೂಪಾಯಿ ಜಮೆಯಾಗಿದ್ದನ್ನು ನೋಡಿ ಹೌಹಾರಿದ್ದಾರೆ.
ಅವರು ಊಹಿಸಲೂ ಸಾಧ್ಯವಾಗದ ಮೊತ್ತ ಖಾತೆಯಲ್ಲಿ ಜಮೆಯಾಗಿತ್ತು ಎಂದು ʼಮಿಂಟ್ʼ ವರದಿ ಮಾಡಿದೆ. ಪ್ರಭಾಕರ್ ಅವರು ಪ್ರಮಾದವಶಾತ್ ಈ ರೀತಿ ಆಗಿದೆ, ಅದು ತ್ವರಿತವಾಗಿ ಸರಿಯಾಗುತ್ತದೆ ಎಂದು ನಂಬಿದ್ದರು. ಆದರೆ ವಿಷಯ ಅಷ್ಟು ಸರಳವಾಗಿರಲಿಲ್ಲ. 48 ಗಂಟೆಗಳಲ್ಲಿ, ಅವರ ಖಾತೆಯನ್ನು ಸ್ಥಗಿತಗೊಳಿಸಲಾಯಿತು ಜೊತೆಗೆ ಇನ್ನು ಮುಂದೆ ಮೂಲಭೂತ ವಹಿವಾಟುಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು.
ಈ ಕುರಿತಂತೆ ಮಾತನಾಡಿರುವ ಪ್ರಭಾಕರ್, ಈಗ ತಮ್ಮ ವ್ಯವಹಾರಕ್ಕೆ ಸರಳವಾದ ಪಾವತಿಗಳನ್ನು ಸಹ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಸಮಸ್ಯೆ ಬಗೆಹರಿಸಲು ಪ್ರಭಾಕರ್ ನಡೆಸಿದ ಪ್ರಯತ್ನಕ್ಕೆ ಬ್ಯಾಂಕ್ ನವರು ನಿರಾಸಕ್ತಿ ತೋರಿದ್ದಾರೆ. ಅವರು ವೈಯಕ್ತಿಕವಾಗಿ ಭೇಟಿ ನೀಡಿದ್ದಲ್ಲದೇ ಇಮೇಲ್ಗಳನ್ನು ಕಳುಹಿಸಿದರೂ ಬ್ಯಾಂಕಿನವರ ಮೌನ ಮುಂದುವರೆದಿದೆ. ಅವರ ಖಾತೆಯನ್ನು ಫ್ರೀಜ್ ಮಾಡುವುದರೊಂದಿಗೆ, ಅವರು ಸರಬರಾಜುಗಳಿಗೆ ಪಾವತಿಸಲು ಅಥವಾ ಮಾರಾಟಗಾರರಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ.
“ಈ ನಿಟ್ಟಿನಲ್ಲಿ ಬ್ಯಾಂಕಿನವರು ಸಹಾಯ ಮಾಡುವ ಬದಲು ನನ್ನ ಬಳಿ ವಿವರಗಳನ್ನು ಕೇಳುತ್ತಿದ್ದಾರೆ, ನಿಮ್ಮ ಮನೆ ಎಲ್ಲಿದೆ, ನೀವು ಎಲ್ಲಿದ್ದೀರಿ ? ಎನ್ನುತ್ತಿದ್ದಾರೆ. ನಿಜವಾಗಿ ಏನಾಯಿತು ಎಂದು ನನಗೆ ತಿಳಿದಿಲ್ಲ. ನನಗೆ ತಿಳಿದಿರುವುದು ಇಷ್ಟೇ ನಾನು ಈಗ ಯಾವುದೇ ವಹಿವಾಟು ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಎಂದಿದ್ದಾರೆ.
ತಾಂತ್ರಿಕ ದೋಷದಿಂದ ಇದು ಸಂಭವಿಸಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದ್ದು, ಸದ್ಯಕ್ಕೆ, ಬ್ಯಾಂಕ್ ದೋಷವನ್ನು ಸರಿಪಡಿಸಿ ತನ್ನ ವ್ಯವಹಾರವನ್ನು ಪುನರಾರಂಭಿಸಲು ಅನುವು ಮಾಡಿಕೊಡುತ್ತದೆ ಎಂಬ ಭರವಸೆಯಲ್ಲಿ ಪ್ರಭಾಕರ್ ಇದ್ದಾರೆ.