alex Certify ಸಾಲದ ಅರ್ಜಿ ತಿರಸ್ಕೃತವಾದ ಬಳಿಕ ಬಂತು ಇಎಂಐ ನೋಟಿಸ್​: ಕುಟುಂಬಸ್ಥರು ಶಾಕ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲದ ಅರ್ಜಿ ತಿರಸ್ಕೃತವಾದ ಬಳಿಕ ಬಂತು ಇಎಂಐ ನೋಟಿಸ್​: ಕುಟುಂಬಸ್ಥರು ಶಾಕ್​

ನಾವು ಮಾಡಿರುವ ಸಾಲದ ಬಡ್ಡಿ ಕಟ್ಟೋದೇ ಕಷ್ಟ. ಅಂತದ್ರಲ್ಲಿ ನಾವು ಮಾಡದ ಸಾಲಕ್ಕೆ ಲೋನ್​ ಕಟ್ಟಿ ಅಂತಾ ಬ್ಯಾಂಕ್​ನವರು ಕೇಳಿದ್ರೆ ಪರಿಸ್ಥಿತಿ ಹೇಗಾಗಬೇಡ..? ಬೆಂಗಳೂರಿನಲ್ಲಿಯೂ ಇಂತದ್ದೇ ಒಂದು ಘಟನೆ ಸಂಭವಿಸಿದೆ. ಮಗಳ ವಿದ್ಯಾಭ್ಯಾಸದ ಖರ್ಚಿಗಾಗಿ ವ್ಯಕ್ತಿಯೊಬ್ಬರು ಬ್ಯಾಂಕ್​ನಲ್ಲಿ ಆರು ಲಕ್ಷ ರೂಪಾಯಿ ಸಾಲಕ್ಕೆ ಅರ್ಜಿ ಹಾಕಿದ್ದರು. ಆದರೆ ಲೋನ್​ ಸ್ಯಾಂಕ್ಷನ್​ ಆಗಿರಲಿಲ್ಲ. ಆದರೆ ಬ್ಯಾಂಕ್​ನ ಅಧಿಕಾರಿಯು ಸೀದಾ ವ್ಯಕ್ತಿಯ ಮನೆಗೆ ಆಗಮಿಸಿ ನೀವು ತೆಗೆದುಕೊಂಡಿದ್ದ ಆರು ಲಕ್ಷ ರೂಪಾಯಿಗೆ ಬಡ್ಡಿ ಪಾವತಿ ಮಾಡುತ್ತಿಲ್ಲ ಎಂದು ಹೇಳಿದಾಗ ಆ ವ್ಯಕ್ತಿ ಹೌಹಾರಿದ್ದಾರೆ.

52 ವರ್ಷ ಪ್ರಾಯದ ಖಾಸಗಿ ಕಂಪನಿ ಉದ್ಯೋಗಿ ಸತೀಶ್​ ಶಂಕರ್ ಬೆಂಗಳೂರಿನ ಯಲಹಂಕ ನಿವಾಸಿ. ಸದ್ಯ ಸತೀಶ್​ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ನನ್ನ ಹೆಸರು ಹಾಗೂ ದಾಖಲೆಗಳನ್ನು ಬಳಕೆ ಮಾಡಿ ಯಾರೋ ಬ್ಯಾಂಕ್​ನಿಂದ ಸಾಲ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ರಷ್ಯಾದಲ್ಲಿ ವೈದ್ಯಕೀಯ ಶಿಕ್ಷಣ ಕಲಿಯುತ್ತಿರುವ ಸತೀಶ್​ ಪುತ್ರಿ ಎಸ್​ ಸುಷ್ಮಾಗಾಗಿ ಪೀಣ್ಯದಲ್ಲಿರುವ ಖಾಸಗಿ ಬ್ಯಾಂಕ್​ನಲ್ಲಿ ಸಾಲಕ್ಕೆ ಸತೀಶ್​ ಅರ್ಜಿ ಸಲ್ಲಿಕೆ ಮಾಡಿದ್ದರು. ಏಜೆಂಟ್​ನ ಸಹಾಯದಿಂದ ಸತೀಶ್​ ಅರ್ಜಿ ಸಲ್ಲಿಕೆ ಮಾಡಿದ್ದರಿಂದ ಅವರಿಗೆ ಆಧಾರ್ ಕಾರ್ಡ್, ಪಾನ್​ ಕಾರ್ಡ್ ಸೇರಿದಂತೆ ಎಲ್ಲಾ ತಮ್ಮ ವೈಯಕ್ತಿಕ ದಾಖಲೆಗಳನ್ನು ನೀಡಿದ್ದಾರೆ. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಬ್ಯಾಂಕ್​ ಇವರ ಸಾಲದ ಅರ್ಜಿಯನ್ನು ತಿರಸ್ಕರಿಸಿತ್ತು. ಆಗಲೇ ಫೈನಲ್​ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಷ್ಮಾ ತಮ್ಮ ವಿದ್ಯಾಭ್ಯಾಸ ಮುಗಿಸಿ ರಷ್ಯಾದಿಂದ ವಾಪಸ್​ ಕೂಡ ಆಗಿದ್ದರು. ಇದಾದ ಬಳಿಕ ಸತೀಶ್​ ಕುಟುಂಬ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರ ಬಗ್ಗೆಯೇ ಮರೆತು ಹೋಗಿತ್ತು.

ಆದರೆ ಜುಲೈ ತಿಂಗಳಲ್ಲಿ ಸತೀಶ್​ರನ್ನು ಹುಡುಕಿಕೊಂಡು ಅವರ ಮನೆಗೇ ಬಂದ ಕಲೆಕ್ಷನ್​ ಅಧಿಕಾರಿ ಯಾಕೆ ನೀವು ಬಡ್ಡಿ ಕಟ್ಟುತ್ತಿಲ್ಲ..? ಎಂದು ಪ್ರಶ್ನೆ ಮಾಡಿದ್ದಾರೆ. ಇದರಿಂದ ಆಶ್ಚರ್ಯಗೊಂಡ ಸತೀಶ್​ ನಾನು ಯಾವ ಸಾಲ ತೆಗೆದುಕೊಂಡಿದ್ದೇನೆ ಎಂದು ಕೇಳಿದಾಗ ಬ್ಯಾಂಕ್​ ಅಧಿಕಾರಿ ಸತೀಶ್​ ಹೆಸರಲ್ಲಿ ಸ್ಯಾಂಕ್ಷನ್​ ಆದ 6,39,706 ರೂಪಾಯಿ ಸಾಲದ ದಾಖಲೆಯನ್ನು ತೋರಿಸಿದ್ದಾರೆ.

ಸತೀಶ್​ರ ಮತ್ತೊಂದು ಬ್ಯಾಂಕ್​ ಖಾತೆಗೆ ಹಣ ಡೆಪಾಸಿಟ್ ಮಾಡಿ ಅದೇ ದಿನ ಆ ಹಣವನ್ನು ಇನ್ನೊಂದು ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಸತೀಶ್​ ನಾನು ಈ ಸಾಲ ತೆಗೆದುಕೊಂಡಿಲ್ಲ. ನಾನು ವಂಚನೆಗೆ ಒಳಗಾಗಿದ್ದೇನೆ ಎಂದು ಎಷ್ಟೇ ಹೇಳಿದರೂ ಸಹ ಕೇಳಲು ಬ್ಯಾಂಕ್​ ಅಧಿಕಾರಿ ತಯಾರಿರಲಿಲ್ಲ.

ಸತೀಶ್​ ಪುತ್ರಿ ಸುಷ್ಮಾ ಕೂಡ ಬ್ಯಾಂಕ್​ ಸಿಬ್ಬಂದಿ ಮೇಲೆ ಆರೋಪ ಹೊರಿಸಿದ್ದು ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ನಾವು ಯಾವುದೇ ಸಾಲ ತೆಗೆದುಕೊಂಡಿಲ್ಲ. ನಮ್ಮ ದಾಖಲೆಗಳನ್ನು ಬಳಸಿ ನಮಗೆ ಮೋಸ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...