ಶಿವಮೊಗ್ಗ: ಯಾವುದೇ ಬ್ಯಾಂಕಿಂಗ್ ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡುವ ಮುನ್ನ ಎಚ್ಚರ ವಹಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಕಳೆದ ಕೆಲವು ದಿನಗಳಿಂದ ಸೈಬರ್ ವಂಚಕರು ಕೆನರಾ ಬ್ಯಾಂಕ್ ಮತ್ತು ಇತರೆ ಬ್ಯಾಂಕುಗಳ ನೈಜವಾಗಿ ಕಾಣುವಂತಹ ಚಿಹ್ನೆಗಳನ್ನು ಬಳಸಿಕೊಂಡು ವಾಟ್ಸಾಪ್, ಟೆಲಿಗ್ರಾಂ ಮತ್ತು ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಕಸ್ಟಮರ್ ಸರ್ವಿಸ್ ಪಾಯಿಂಟ್ ಎಂಬ ಫೇಕ್ ಮೊಬೈಲ್ ಅಪ್ಲಿಕೇಶನ್ ಫೈಲ್ ಅನ್ನು ಸೆಂಡ್ ಮಾಡಿ ಇದು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡು ನಿಮ್ಮ ಆಧಾರ್, ಕೆವೈಸಿ, ಪಾನ್ ಕಾರ್ಡ್ ವಿವರ, ಸಿಮ್ ಕಾರ್ಡ್ ನಂಬರ್ ಅಪ್ಡೇಟ್ ಮಾಡಿ ಎಂದು ತಿಳಿಸುತ್ತಿದ್ದಾರೆ. ಒಂದು ವೇಳೆ ಯಾರಾದರೂ ಈ ರೀತಿಯ ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿದ ನಂತರ ಸೈಬರ್ ವಂಚಕರು ಸದರಿ ವ್ಯಕ್ತಿಯ ಬ್ಯಾಂಕಿನ ಮಾಹಿತಿ ಪಡೆದುಕೊಂಡು ಹಣವನ್ನು ನೇರವಾಗಿ ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಎಚ್ಚರಿಕೆ ನೀಡಲಾಗಿದೆ.
ಒಂದು ವೇಳೆ ಸಾರ್ವಜನಿಕರು ಈ ರೀತಿಯ ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಂಡಿದ್ದಲ್ಲಿ ಮೊದಲು ನಿಮ್ಮ ಮೊಬೈಲ್ ನ ಇಂಟರ್ನೆಟ್ ಆಫ್ ಮಾಡಿ ನಂತರ ಸೆಟ್ಟಿಂಗ್ಸ್ ನಲ್ಲಿ ಆಪ್ ಮ್ಯಾನೇಜ್ಮೆಂಟ್, ಆಪ್ಸ್ ಮತ್ತು ಡೌನ್ಲೋಡ್ ಪರಿಶೀಲಿಸಿ ಒಂದು ವೇಳೆ ಯಾವುದೇ ಅನ್ ನೌನ್ ಫೈಲ್ ಇದ್ದರೆ ಅದನ್ನು ಡಿಲೀಟ್ ಮಾಡಿ.
*#67# ನಂಬರ್ ಡಯಲ್ ಮಾಡಿ ಇದರಲ್ಲಿ ನಿಮ್ಮ ಮೊಬೈಲ್ ನಂಬರ್ ಬೇರೆ ಯಾವ ಯಾವ ಸರ್ವಿಸ್ ಗಳಿಗೆ ಫಾರ್ವರ್ಡ್ ಇದೆ ಎಂದು ತಿಳಿಯಲಿದೆ. ಇದರಲ್ಲಿ ಫಾರ್ವರ್ಡ್ ಆಗಿದ್ದರೆ ನಿಮ್ಮ ಒಟಿಪಿಗಳು ಸೈಬರ್ ವಂಚಕರ ಹತ್ತಿರ ಹೋಗುತ್ತವೆ. ಆದ್ದರಿಂದ ಫಾರ್ವರ್ಡ್ ಇದ್ದವರು ಕೂಡಲೇ #002# ನಂಬರ್ ಡಯಲ್ ಮಾಡಿದಲ್ಲಿ ಎಲ್ಲಾ ಸರ್ವಿಸ್ ಗಳು ಡಿಸೇಬಲ್ ಆಗುತ್ತದೆ.
ಯಾವುದೇ ಬ್ಯಾಂಕಿನವರು ಫೋನ್ ಅಪ್ಲಿಕೇಶನ್ ಗಳ ಮೂಲಕ ತಮ್ಮ ವೈಯಕ್ತಿಕ ಮಾಹಿತಿ ಮತ್ತು ಅಕೌಂಟ್ ವಿವರಗಳನ್ನು ಕೇಳುವುದಿಲ್ಲ. ಆದ್ದರಿಂದ ಸಾರ್ವಜನಿಕರು ಯಾವುದೇ ಅನಾಮಧೇಯ ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡುವ ಮೊದಲು ಅದರ ಸತ್ಯಾಸತ್ಯತೆ ಬಗ್ಗೆ ಪರಿಶೀಲಿದ ನಂತರವೇ ಬಳಸುವುದು ಎಂದು ಪೊಲೀಸ್ ಇಲಾಖೆಯಿಂದ ತಿಳಿಸಲಾಗಿದೆ.