ಬ್ಯಾಂಕ್ ಖಾತೆದಾರರಿಗೆ ಕೆಲವೊಂದು ನಿಯಮಾವಳಿಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜಾರಿಗೊಳಿಸಿದ್ದು, ಈ ಪೈಕಿ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು, ನಿಗದಿತ ಸಂಖ್ಯೆಯ ಎಟಿಎಂ ವಹಿವಾಟು, ಎಸ್ಎಂಎಸ್ ಸೇವಾ ಶುಲ್ಕ ಮೊದಲಾದವು ಸೇರಿವೆ.
ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದರೆ ಅದಕ್ಕೆ ದಂಡ, ನಿಗದಿತ ಮಿತಿಗಿಂತ ಹೆಚ್ಚಿನ ವಹಿವಾಟು ನಡೆಸಿದರೆ ಹೆಚ್ಚುವರಿ ಶುಲ್ಕ ಹಾಗೂ ಎಸ್ಎಂಎಸ್ ಸಂದೇಶಕ್ಕೆ ಶುಲ್ಕ ವಿಧಿಸಲಾಗುತ್ತಿದ್ದು, 2018 ರಿಂದ ಬ್ಯಾಂಕುಗಳು ಬರೋಬ್ಬರಿ 35 ಸಾವಿರ ಕೋಟಿ ರೂಪಾಯಿ ಸಂಗ್ರಹಿಸಿವೆ ಎಂಬ ಮಾಹಿತಿ ಈಗ ಬಹಿರಂಗವಾಗಿದೆ.
ರಾಜ್ಯಸಭೆಯಲ್ಲಿ ಹಣಕಾಸು ಸಚಿವಾಲಯ ಈ ಕುರಿತ ಮಾಹಿತಿ ನೀಡಿದ್ದು, ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳದಿರುವುದಕ್ಕೆ 21,044.04 ಕೋಟಿ ರೂಪಾಯಿ, ಎಟಿಎಂ ಗಳಲ್ಲಿ ನಿಗದಿಗಿಂತ ಹೆಚ್ಚುವರಿ ವಹಿವಾಟಿನ ಶುಲ್ಕವಾಗಿ 8,289.32 ಕೋಟಿ ರೂಪಾಯಿ ಹಾಗೂ ಎಸ್ಎಂಎಸ್ ಶುಲ್ಕ 6,254.32 ಕೋಟಿ ರೂಪಾಯಿಗಳನ್ನು ಬ್ಯಾಂಕುಗಳು ಸಂಗ್ರಹಿಸಿದ್ದು, ಒಟ್ಟಾರೆ 35,587.68 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.