ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡಲು ಸರ್ಕಾರ ನಿರ್ಧರಿಸಿದ್ದು, ಈ ಹಣವನ್ನು ಬಿಪಿಎಲ್ ಕಾರ್ಡ್ ಹೊಂದಿದ ಯಜಮಾನ/ನಿ ಖಾತೆಗೆ ಜಮಾ ಮಾಡಲಾಗುತ್ತದೆ.
ಅನ್ನಭಾಗ್ಯ ಯೋಜನೆಯ 5 ಕೆಜಿ ಅಕ್ಕಿ ಹಣ ಬ್ಯಾಂಕ್ ಖಾತೆಗೆ ಜಮಾ ಆಗಲು ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆಯಾಗಿರಬೇಕು. ಬಿಪಿಎಲ್ ಪಡಿತರ ಚೀಟಿ ಹೊಂದಿದ್ದು, ಈ ಚೀಟಿಯಲ್ಲಿ ಮನೆಯ ಮುಖ್ಯಸ್ಥರು ಯಾರು ಎಂದು ನಮೂದಾಗಿರುತ್ತದೆಯೋ ಅವರ ಹೆಸರಲ್ಲಿ ಬ್ಯಾಂಕ್ ಖಾತೆ ಹೊಂದಿರಬೇಕು. ಆ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು.
ಸಾಮಾನ್ಯವಾಗಿ ಬಿಪಿಎಲ್ ಕಾರ್ಡ್ ದಾರರಲ್ಲಿ ಶೇಕಡ 92 ರಷ್ಟು ಮಹಿಳೆಯರೇ ಯಜಮಾನಿ ಆಗಿರುವುದರಿಂದ ಗೃಹಲಕ್ಷ್ಮಿ ಯೋಜನೆ ಜಾರಿಗೆ ಮೊದಲೇ ಅವರ ಖಾತೆಗಳಿಗೆ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಲಿದೆ. ಮನೆಯ ಮುಖ್ಯಸ್ಥರ ಹೆಸರಲ್ಲಿ ಖಾತೆ ಇಲ್ಲದಿದ್ದರೆ ಕುಟುಂಬದ ಬೇರೆ ಸದಸ್ಯರ ಖಾತೆಯ ವಿವರ ನೀಡಬಹುದಾಗಿದೆ. 1.28 ಕೋಟಿ ಫಲಾನುಭವಿಗಳಲ್ಲಿ 6 ಲಕ್ಷ ಖಾತೆದಾರರ ಖಾತೆ ಆಧಾರ್ ಲಿಂಕ್ ಆಗಿಲ್ಲವೆಂದು ಹೇಳಲಾಗಿದೆ. ಆಧಾರ್ ಜೋಡಣೆ ಮಾಡಿಸಿದ ಬಳಿಕ ಅಂತಹವರ ಖಾತೆಗಳಿಗೂ ಅನ್ನ ಭಾಗ್ಯ ಯೋಜನೆಯ ಹಣ ಜಮಾ ಆಗಲಿದೆ. ಮನೆಯ ಯಜಮಾನಿ ಖಾತೆಗೆ 2 ಸಾವಿರ ರೂ. ಜಮಾ ಮಾಡುವ ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ ನಲ್ಲಿ ಚಾಲನೆ ನೀಡಲಿದ್ದು, ಅಷ್ಟರೊಳಗೆ ಜುಲೈನಿಂದಲೇ 5 ಕೆಜಿ ಅಕ್ಕಿ ಹಣ ನೀಡಲಾಗುವುದು ಎನ್ನಲಾಗಿದೆ.