ಬೆಂಗಳೂರು: ಭಾರತದಲ್ಲಿ ಮುಸ್ಲಿಂ ಯುವಕರನ್ನು ಉಗ್ರಗಾಮಿಗಳಾಗಿ ಮಾಡಲು ತರಬೇತಿ ನೀಡಿದ ಜೊತೆಗೆ ಡಕಾಯಿತಿ ಮೂಲಕ ಉಗ್ರ ಚಟುವಟಿಕೆಗಳಿಗೆ ಹಣ ಸಂಗ್ರಹಿಸುತ್ತಿದ್ದ ಬಾಂಗ್ಲಾದೇಶ ಮೂಲದ ವ್ಯಕ್ತಿಗೆ ಬೆಂಗಳೂರು ಎನ್ಐಎ ಕೋರ್ಟ್ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಅಲ್ಲದೆ, 57 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಬಾಂಗ್ಲಾದೇಶದ ಜಹಿದುಲ್ ಇಸ್ಲಾಂ ಶಿಕ್ಷೆಗೆ ಒಳಗಾದ ವ್ಯಕ್ತಿ. ಬಾಂಗ್ಲಾದೇಶದ ಜೈಲಿನಿಂದ ತಪ್ಪಿಸಿಕೊಂಡು ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ ಈತ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಿಂದ ಮುಸ್ಲಿಂ ಯುವಕರನ್ನು ಬೆಂಗಳೂರಿಗೆ ಕರೆತಂದು ಅವರಿಗೆ ಉಗ್ರಗಾಮಿಗಳಾಗುವ ರೀತಿ ಶಸ್ತ್ರಾಸ್ತ್ರ ತರಬೇತಿ ಕೊಡಿಸುತ್ತಿದ್ದ. ಇದರೊಂದಿಗೆ ಶಸ್ತ್ರಾಸ್ತ್ರ ಸಂಗ್ರಹ, ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸಲು ಬೆಂಗಳೂರಿನಲ್ಲಿ ಡಕಾಯಿತಿ ಕೂಡ ನಡೆಸಿದ್ದ. ಡಕಾಯಿತಿಯಿಂದ ಬಂದ ಹಣವನ್ನು ಉಗ್ರ ಚಟುವಟಿಕೆಗಳಿಗೆ ಬಳಸುತ್ತಿದ್ದ.
ನಿಷೇಧಿತ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ ಸಂಘಟನೆಯ ಭಾರತದ ಕಮಾಂಡರ್ ಆಗಿದ್ದ ಜಹೀದುಲ್ ಇಸ್ಲಾಂ ಬೆಂಗಳೂರಿನಲ್ಲಿ ಕೃತ್ಯ ಎಸಗಿದ್ದ. ಈತ ಮತ್ತು ಸಂಘಟನೆಯ ಮುಖ್ಯಸ್ಥ ಸಲಾಲುದ್ದೀನ್ ಸಲೆಹಿನ್ ಬಾಂಗ್ಲಾದೇಶದಲ್ಲಿ 2005ರಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಬಂಧಿತರಾಗಿದ್ದರು. 2014ರಲ್ಲಿ ಜೈಲಿನಿಂದ ಪರಾರಿಯಾಗಿ ಭಾರತಕ್ಕೆ ಬಂದಿದ್ದರು. ತಲೆಮರೆಸಿಕೊಂಡಿದ್ದಾಗಲೇ ಪಶ್ಚಿಮ ಬಂಗಾಳದಲ್ಲಿ 2014ರಲ್ಲಿ ಸ್ಪೋಟ ನಡೆಸಿದ್ದರು. ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದರು. ನಂತರ ಬೆಂಗಳೂರಿಗೆ ಬಂದಿದ್ದರು. 2018 ರಲ್ಲಿ ಬೋದಗಯಾದಲ್ಲಿ ಸ್ಪೋಟ ನಡೆಸಿದ್ದರು.