ಢಾಕಾ: 2023ರ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಗೆ ದಿನಗಣನೆ ಶುರುವಾಗಿದೆ. ಏಷ್ಯಾದ ಎಲ್ಲ ಕ್ರಿಕೆಟ್ ತಂಡಗಳು ಸಿದ್ಧತೆ ನಡೆಸುತ್ತಿದ್ದಾರೆ. ಆಟಗಾರರು ಜಿಮ್‌ನಲ್ಲಿ ಕಾಲಕಳೆಯುತ್ತಿದ್ದು ಹೆಚ್ಚು ಬೆವರು ಹೊರಹಾಕುತ್ತಿದ್ದಾರೆ.
ಕ್ರಿಕೆಟಿಗರು ವರ್ಷವಿಡೀ ಆಟವಾಡುವುದ್ರಿಂದ ಜಿಮ್ ಯಾಕೆ ಬೇಕು ಅನ್ನೋದು ಕೂಡ ಒಂದು ಪ್ರಶ್ನೆಯಾಗಿದೆ. ಆಟಕ್ಕೆ ದೈಹಿಕ ಕ್ಷಮತೆ ಮಾತ್ರವಲ್ಲ ಮಾನಸಿಕವಾಗಿಯೂ ಗಟ್ಟಿಯಿರಬೇಕು. ಇದೀಗ ವಿಲಕ್ಷಣ ಘಟನೆಯಲ್ಲಿ ಬಾಂಗ್ಲಾದೇಶದ ಆಟಗಾರ ಬೆಂಕಿ ಕೆಂಡದ ಮೇಲೆ ನಡೆದಿರುವ ವಿಡಿಯೋ ವೈರಲ್ ಆಗಿದೆ.
ಬಾಂಗ್ಲಾದೇಶದ ಆರಂಭಿಕ ಆಟಗಾರ ಮನಸ್ಸಿನ ಒತ್ತಡವನ್ನು ನಿಯಂತ್ರಿಸಲು ಬೆಂಕಿ ಕೆಂಡದ ಮೇಲೆ ನಡೆದಿದ್ದಾರೆ. ಬಾಂಗ್ಲಾದೇಶದ ಸ್ಟಾರ್ ಓಪನರ್ ಮೊಹಮ್ಮದ್ ನಯಿಮ್ ಶೇಖ್ ಬೆಂಕಿ ಕೆಂಡದಲ್ಲಿ ನಡೆಯುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ ಏಷ್ಯಾ ಕಪ್-2023
ಏಷ್ಯಾ ಕಪ್‌ಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಜಯ್ ಶಾ ಘೋಷಿಸಿದ ನಂತರ, ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಂತೆ ಸ್ಪರ್ಧೆಯ ರಚನೆಯನ್ನು ಮಾರ್ಪಡಿಸಲಾಗಿದೆ. ಆಗಸ್ಟ್ 30 ರಂದು ಪಾಕಿಸ್ತಾನ ಮತ್ತು ನೇಪಾಳವು ಪಾಕಿಸ್ತಾನದ ಮುಲ್ತಾನ್‌ನಲ್ಲಿ ಏಷ್ಯಾ ಕಪ್ ನ ಮೊದಲ ಪಂದ್ಯವನ್ನು ಆಡಲಿದೆ. ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ನಂತರ ಸೆಪ್ಟೆಂಬರ್ 4ರಂದು ಲಂಕಾದ ಕ್ಯಾಂಡಿಯಲ್ಲಿ ನೇಪಾಳ ವಿರುದ್ಧ ಟೀಂ ಇಂಡಿಯಾ ಸೆಣಸಲಿದೆ.
ಮೂರು ಗುಂಪು ಹಂತದ ಪಂದ್ಯಗಳು ಮತ್ತು ಒಂದು ಸೂಪರ್ ಫೋರ್ ಹಂತದ ಪಂದ್ಯವು ಪಾಕಿಸ್ತಾನದಲ್ಲಿ ನಡೆಯಲಿದೆ. ಸ್ಪರ್ಧೆಯ ಉಳಿದ ಭಾಗವು ಶ್ರೀಲಂಕಾದಲ್ಲಿ ನಡೆಯಲಿದೆ. ಫೈನಲ್ ಸೆಪ್ಟೆಂಬರ್ 17 ರಂದು ಕೊಲಂಬೊದಲ್ಲಿ ನಡೆಯಲಿದೆ. ಸೂಪರ್ ಫೋರ್ ಹಂತದಿಂದ ಅಗ್ರ ಎರಡು ತಂಡಗಳು ಫೈನಲ್‌ಗೆ ಲಗ್ಗೆಯಿಡಲಿದೆ.