
ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳು ಮತ್ತು ಭಕ್ತರ ಮೇಲೆ ದಾಳಿ, ಹಿಂಸಾಚಾರ ಹೆಚ್ಚಾಗಿದ್ದು, ದೇಶದ ಹಲವು ಭಾಗಗಳಲ್ಲಿ ಕೋಮು ಗಲಭೆಗಳ ಸನ್ನಿವೇಶಗಳು ಸೃಷ್ಟಿಯಾಗಿವೆ. ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ಆಚರಣೆಯ ಸಮಯದಲ್ಲಿ ದೇವಾಲಯಗಳು ಮತ್ತು ವಿಗ್ರಹಗಳನ್ನು ಧ್ವಂಸಗೊಳಿಸಿದ ಕೆಲವೇ ದಿನಗಳಲ್ಲಿ, ದಸರಾ ದಿನದಂದು ಮತ್ತೊಂದು ದಾಳಿ ನಡೆದಿದೆ.
ನೋಖಾಲಿ ಪ್ರದೇಶದ ಇಸ್ಕಾನ್ ದೇವಸ್ಥಾನದಲ್ಲಿ ಭಕ್ತರ ಮೇಲೆ ಗುಂಪೊಂದು ಹಿಂಸಾತ್ಮಕವಾಗಿ ದಾಳಿ ನಡೆಸಿದೆ. ದಾಳಿಯಲ್ಲಿ ಅನೇಕ ಭಕ್ತರು ಗಾಯಗೊಂಡಿದ್ದು, ದೇವಾಲಯದ ಆಸ್ತಿಗೆ ಹಾನಿಯಾಗಿದೆ. ಧ್ವಂಸಗೊಳಿಸಿದ ದೇವಾಲಯದ ಚಿತ್ರಗಳನ್ನು ಇಸ್ಕಾನ್, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕಠಾರಿಯಿಂದ ದಾಳಿಗೊಳಗಾದ ಭಕ್ತನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದೆ.
ಇಸ್ಕಾನ್ ಸಂಸ್ಥಾಪಕ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಶಿಲ್ಪವನ್ನು ಗೂಂಡಾಗಳು ಸುಟ್ಟುಹಾಕಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಇಸ್ಕಾನ್ ಹೇಳಿದೆ. ದೇವಾಲಯದ ಪ್ರಾಧಿಕಾರವು ಬಾಂಗ್ಲಾದೇಶ ಸರ್ಕಾರಕ್ಕೆ ಎಲ್ಲಾ ಹಿಂದೂಗಳ ಸುರಕ್ಷತೆಯನ್ನು ಖಾತರಿಪಡಿಸಬೇಕು ಮತ್ತು ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದೆ.
ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಕೋಮುಗಲಭೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹೊರತಾಗಿಯೂ ಈ ಹಿಂಸಾಚಾರ ನಡೆದಿದೆ. ಗುರುವಾರ, ಹಬಿಗಂಜ್ ಜಿಲ್ಲೆಯಲ್ಲಿ ದುರ್ಗಾ ಪೂಜಾ ಸ್ಥಳದಲ್ಲಿ ಮದ್ರಸಾ ವಿದ್ಯಾರ್ಥಿಗಳು ಮತ್ತು ಹಿಂದೂಗಳ ನಡುವಿನ ಘರ್ಷಣೆಯಲ್ಲಿ ಒಬ್ಬ ಪೊಲೀಸ್ ಸೇರಿದಂತೆ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಇಸ್ಕಾನ್ ಕೋಲ್ಕತ್ತಾದ ಉಪಾಧ್ಯಕ್ಷ ಮತ್ತು ವಕ್ತಾರ ರಾಧಾರಾಮನ್ ದಾಸ್ ಅವರು ಈ ವಿಷಯದ ಬಗ್ಗೆ ತಕ್ಷಣವೇ ಬಾಂಗ್ಲಾದೇಶದೊಂದಿಗೆ ಮಾತನಾಡಲು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ವಿನಂತಿಸಿದ್ದಾರೆ. ‘ಬಾಂಗ್ಲಾದೇಶಿ ಹಿಂದುಗಳನ್ನು ಉಳಿಸಿ’ ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಟ್ವೀಟ್ ಮಾಡಿದ ದಾಸ್, ನೆರೆಯ ದೇಶದಲ್ಲಿ ಹಿಂದುಗಳ ಮೇಲೆ ವ್ಯಾಪಕ ಹಿಂಸಾಚಾರ ನಡೆಯುತ್ತಿದೆ ಎಂದು ಹೇಳಿದ್ದಾರೆ.
ನೊಖಾಲಿಯ ಇಸ್ಕಾನ್ ದೇವಾಲಯದ ಹೊರಗೆ ಜಮಾಯಿಸಿದ 500 ಜನರ ಗುಂಪು, ವಿಗ್ರಹಗಳನ್ನು ಧ್ವಂಸ ಮಾಡಿ, ದೇವಸ್ಥಾನಕ್ಕೆ ಬೆಂಕಿ ಹಚ್ಚಿದೆ ಎಂದು ದಾಸ್ ಹೇಳಿದ್ದಾರೆ.
https://twitter.com/iskcon/status/1449029665578831873?ref_src=twsrc%5Etfw%7Ctwcamp%5Etweetembed%7Ctwterm%5E1449029665578831873%7Ctwgr%5E%7Ctwcon%5Es1_&ref_url=https%3A%2F%2Fwww.republicworld.com%2Fworld-news%2Frest-of-the-world-news%2Fbangladesh-iskcon-temple-and-devotees-violently-attacked-during-dussehra-celebrations.html