
ಬಾಂಗ್ಲಾದೇಶ ಹಾಗೂ ನ್ಯೂಜಿಲ್ಯಾಂಡ್ ನಡುವಣ ಅಂತಿಮ ಏಕದಿನ ಪಂದ್ಯ ಇಂದು ಢಾಕಾದಲ್ಲಿ ನಡೆಯಲಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದು, ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಜಯಭೇರಿ ಸಾಧಿಸಿದೆ. ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ಗೆದ್ದರೆ ಸರಣಿ ಸಮಬಲವಾಗಲಿದೆ.
ಲಾಕಿ ಫರ್ಗುಸನ್ ನಾಯಕತ್ವದ ನ್ಯೂಜಿಲೆಂಡ್ ತಂಡ ಈ ಪಂದ್ಯವನ್ನು ಗೆದ್ದು ಸರಣಿ ತನ್ನದಾಗಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಇನ್ನೇನು ವಿಶ್ವಕಪ್ ಶುರುವಾಗಲು ಕೆಲವೇ ದಿನಗಳಿದ್ದು, ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ.
ಕಳೆದ ವಿಶ್ವಕಪ್ ಫೈನಲ್ ನಲ್ಲಿ ಈ ಎರಡು ತಂಡಗಳ ನಡುವೆ ನಡೆದ ರೋಚಕ ಪಂದ್ಯವನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಪಂದ್ಯ ಡ್ರಾ ಆಗಿ ನಂತರ ಸೂಪರ್ ಓವರ್ ಕೂಡ ಡ್ರಾ ಆಗಿತ್ತು. ಬೌಂಡರಿ ಆಧಾರದ ಮೇಲೆ ಇಂಗ್ಲೆಂಡ್ ತಂಡವನ್ನು ವಿಜೇತರೆಂದು ಘೋಷಿಸಲಾಯಿತು.