ಢಾಕಾ: ಬಾಂಗ್ಲಾದೇಶದ ಟಿವಿ ಪತ್ರಕರ್ತೆಯ ಶವವನ್ನು ರಾಜಧಾನಿ ಢಾಕಾದ ಹತಿರ್‌ಜೀಲ್ ಸರೋವರದಿಂದ ಬುಧವಾರ ವಶಪಡಿಸಿಕೊಳ್ಳಲಾಗಿದೆ.
32 ವರ್ಷ ವಯಸ್ಸಿನ ಟಿವಿ ಪತ್ರಕರ್ತೆ ಸಾರಾ ರಹನುಮಾ ಢಾಕಾ ಸರೋವರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪುತ್ರ ಸಜೀಬ್ ವಾಝೇದ್ ಅವರು ಪತ್ರಕರ್ತೆ ಸಾವನ್ನು ದೇಶದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಮತ್ತೊಂದು ಕ್ರೂರ ದಾಳಿ ಎಂದು ಟೀಕಿಸಿದ್ದಾರೆ.
ಢಾಕಾ ಟ್ರಿಬ್ಯೂನ್ ಪ್ರಕಾರ, ಮಾಧ್ಯಮ ಸಂಸ್ಥೆ ಗಾಜಿ ಟಿವಿಯಲ್ಲಿ ನ್ಯೂಸ್ ರೂಂ ಸಂಪಾದಕರಾಗಿದ್ದ ಸಾರಾ ರಹನುಮಾ(32) ಎಂದು ಗುರುತಿಸಲಾದ ಮೃತ ಪತ್ರಕರ್ತೆಯ ಶವವನ್ನು ಢಾಕಾ ನಗರದ ಹತಿರ್‌ಜೀಲ್ ಸರೋವರದಿಂದ ವಶಪಡಿಸಿಕೊಳ್ಳಲಾಗಿದೆ.
ಇದು ಬಾಂಗ್ಲಾದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಮತ್ತೊಂದು ಕ್ರೂರ ದಾಳಿಯಾಗಿದೆ. ಗಾಜಿ ಟಿವಿ ಇತ್ತೀಚೆಗೆ ಬಂಧಿಸಲ್ಪಟ್ಟ ಗೋಲಂ ದಸ್ತಗೀರ್ ಗಾಜಿ ಒಡೆತನದ ಜಾತ್ಯತೀತ ಸುದ್ದಿ ವಾಹಿನಿಯಾಗಿದೆ ಎಂದು ಸಜೀಬ್ ತಿಳಿಸಿದ್ದಾರೆ.
ತನ್ನ ಸಾವಿಗೆ ಮುನ್ನ ರಹನುಮಾ ತನ್ನ ಫೇಸ್‌ಬುಕ್‌ನಲ್ಲಿ ಮಂಗಳವಾರ ರಾತ್ರಿ ಫಹೀಮ್ ಫೈಸಲ್ ಎಂಬಾತನನ್ನು ಟ್ಯಾಗ್ ಮಾಡಿ ಸ್ಟೇಟಸ್ ಹಾಕಿದ್ದಾಳೆ. ನಿಮ್ಮಂತಹ ಸ್ನೇಹಿತನನ್ನು ಹೊಂದಲು ಸಂತೋಷವಾಗಿದೆ. ದೇವರು ನಿಮ್ಮನ್ನು ಯಾವಾಗಲೂ ಆಶೀರ್ವದಿಸುತ್ತಾನೆ. ನೀವು ಶೀಘ್ರದಲ್ಲೇ ನಿಮ್ಮ ಎಲ್ಲಾ ಕನಸುಗಳನ್ನು ಪೂರೈಸುವಿರಿ ಎಂದು ಭಾವಿಸುತ್ತೇವೆ. ನಾವು ಒಟ್ಟಿಗೆ ಸಾಕಷ್ಟು ಯೋಜನೆಗಳನ್ನು ಹೊಂದಿದ್ದೇವೆ ಎಂದು ನನಗೆ ತಿಳಿದಿದೆ. ಕ್ಷಮಿಸಿ, ನಮ್ಮ ಯೋಜನೆಗಳನ್ನು ಪೂರೈಸಲು ಸಾಧ್ಯವಿಲ್ಲ ಎಂದು ಅವರು ಬರೆದಿದ್ದಾರೆ. ಹಿಂದಿನ ಪೋಸ್ಟ್ ನಲ್ಲಿ ಅವರು “ಸಾವಿಗೆ ಸಮಾನವಾದ ಜೀವನವನ್ನು ಬದುಕುವುದಕ್ಕಿಂತ ಸಾಯುವುದು ಉತ್ತಮ” ಎಂದು ಬರೆದಿದ್ದಾರೆ:
ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆ(ಡಿಎಂಸಿಹೆಚ್) ಪೊಲೀಸ್ ಹೊರ ಠಾಣೆ ಉಸ್ತುವಾರಿ ಇನ್ಸ್ ಪೆಕ್ಟರ್ ಬಚ್ಚು ಮಿಯಾ ಘಟನೆಯನ್ನು ದೃಢಪಡಿಸಿದ್ದಾರೆ.