ಬೆಂಗಳೂರು: ಬೆಂಗಳೂರಿನಲ್ಲಿ ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ.
ಮಹಿಳಾ ಅಪರಾಧಿ ತಾನಿಯಾ ಖಾನಂಗೆ 20 ವರ್ಷ ಶಿಕ್ಷೆ ಪ್ರಕಟಿಸಲಾಗಿದ್ದು, ಅಪರಾಧಿ ಜಮಾಲ್ ಗೆ 5 ವರ್ಷ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. ಬೆಂಗಳೂರಿನ 54ನೇ ಸಿಸಿಹೆಚ್ ಕೋರ್ಟ್ ನ್ಯಾಯಾಧೀಶ ಎನ್. ಸುಬ್ರಹ್ಮಣ್ಯ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ವೀರಣ್ಣ ವಾದ ಮಂಡಿಸಿದ್ದರು.
2021ರ ಮೇ 18 ರಂದು ಬೆಂಗಳೂರಿನಲ್ಲಿ ಬಾಂಗ್ಲಾದೇಶದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಅಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರಿನ ರಾಮಮೂರ್ತಿನಗರದಲ್ಲಿ ವಾಸವಾಗಿದ್ದ ಆರೋಪಿಗಳು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಸ್ನೇಹಿತರ ನಡುವೆಯೇ ಕಲಹ ಉಂಟಾಗಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ವೇಳೆ ಕೆಲವರು ಆಕೆಯನ್ನು ಹಿಡಿದುಕೊಂಡಿದ್ದರು. ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದು ಹರಿಬಿಡಲಾಗಿತ್ತು. ವಿಡಿಯೋ ವೈರಲ್ ಆದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.