ಟೈಟಾನಿಕ್ ಅವಶೇಷಗಳನ್ನು ನೋಡಲು ಕರೆದೊಯ್ಯುತ್ತಿದ್ದ ವೇಳೆ ಉತ್ತರ ಅಟ್ಲಾಂಟಿಕ್‌ನಲ್ಲಿ ನಾಪತ್ತೆಯಾಗಿರುವ ಜಲಾಂತರ್ಗಾಮಿಯನ್ನ ಪತ್ತೆ ಮಾಡುತ್ತಿರುವ ತಂಡಕ್ಕೆ ಮಹತ್ವದ ಸುಳಿವೊಂದು ಸಿಕ್ಕಿದೆ. ಅಟ್ಲಾಂಟಿಕ್ ಮಹಾಸಾಗರದ ನೀರಿನ ಅಡಿಯಲ್ಲಿ ಪ್ರತಿ 30 ನಿಮಿಷಗಳಿಗೊಮ್ಮೆ ಸೋನಾರ್‌ಗಳಿಗೆ ಬಡಿಯುವ ಶಬ್ದ ಕೇಳಿಬರುತ್ತಿದೆ. ಈ ಮೂಲಕ ಜಲಾಂತರ್ಗಾಮಿ ಹಡಗಿನಲ್ಲಿದ್ದವರು ಜೀವಂತವಾಗಿರಬಹುದು ಎಂಬ ಮಹತ್ವದ ಸುಳಿವು ರಕ್ಷಣಾ ತಂಡಗಳಿಗೆ ಸಿಕ್ಕಿದೆ.
ನೀರೊಳಗೆ ಮೊದಲು ಶಬ್ದಗಳನ್ನು ಕೇಳಿದ ನಂತರ ಹೆಚ್ಚುವರಿ ಸೋನಾರ್ ಸಾಧನಗಳನ್ನು ಸ್ಥಾಪಿಸಲಾಯಿತು. ಹೆಚ್ಚುವರಿ ಸೋನಾರ್‌ಗಳನ್ನು ನಿಯೋಜಿಸಿದ ನಂತರವೂ ಬಡಿಯುವ ಶಬ್ಧ ಕೇಳಿಸುತ್ತಲೇ ಇತ್ತು. ಆದರೆ ಇದು ಯಾವಾಗ ಕೇಳಿತು ಅಥವಾ ಎಷ್ಟು ಸಮಯದವರೆಗೆ ಎಂಬುದು ಸ್ಪಷ್ಟವಾಗಿಲ್ಲ .
ಟೈಟಾನಿಕ್ ಅವಶೇಷಗಳನ್ನು ನೋಡಲು ಜನರನ್ನು ಕರೆದೊಯ್ಯುತ್ತಿದ್ದ ಸಣ್ಣ ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ತನ್ನ ಸಿಬ್ಬಂದಿಯೊಂದಿಗೆ ಭಾನುವಾರ ನಾಪತ್ತೆಯಾಯಿತು. ಹಡಗು ನಾಪತ್ತೆ ಬಳಿಕ ಸುಮಾರು 70 ರಿಂದ 96 ಗಂಟೆಗಳ ಕಾಲ ಉಳಿಯಲು ಹಡಗಿನಲ್ಲಿ ಆಮ್ಲಜನಕವಿದೆ. ಅಮೆರಿಕ ಮತ್ತು ಕೆನಡಾದ ಕೋಸ್ಟ್ ಗಾರ್ಡ್‌ಗಳೊಂದಿಗಿನ ಸಿಬ್ಬಂದಿಗಳು ಕೇಪ್ ಕಾಡ್‌ನಿಂದ ಪೂರ್ವಕ್ಕೆ 900 ಮೈಲುಗಳಷ್ಟು ಸಮುದ್ರದ ಮೇಲ್ಮೈಯಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ನೀರಿನ ಕೆಳಗೆ 13,000 ಅಡಿಗಳಷ್ಟು ಆಳದಲ್ಲಿ ಶಬ್ದಗಳನ್ನು ಕೇಳಲು ಸೋನಾರ್ ಅನ್ನು ಬಳಸಿದ್ದಾರೆ.