ಬೆಂಗಳೂರು: ಟರ್ಫ್ ಕ್ಲಬ್ ಮಾಸಿಕ ಪರವಾನಗಿಯ ನವೀಕರಣಕ್ಕೆ ರಾಜ್ಯ ಸರ್ಕಾರ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ರೇಸ್ ಕೋರ್ಸ್ ನಲ್ಲಿ ನಡೆಯಬೇಕಿದ್ದ ರೇಸ್ ಸೇರಿದಂತೆ ಇತರ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ.
ಈ ಮೂಲಕ ಕಳೆದ 13 ವರ್ಷಗಳಿಂದ ರಾಜ್ಯ ಸರ್ಕಾರ ಹಾಗೂ ಟರ್ಫ್ ಕ್ಲಬ್ ನಡುವಿನ ಹಗ್ಗಜಗ್ಗಾಟಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. 2008ರಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಟರ್ಫ್ ಕ್ಲಬ್ ನ್ನು ಬೇರೆಡೆ ಸ್ಥಳಾಂತರ ಮಾಡುವುದಾಗಿ ಘೋಷಿಸಿತ್ತು. ಇದನ್ನು ಪ್ರಶ್ನಿಸಿ ಬಿಟಿಸಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಅಂದಿನಿಂದ ಟರ್ಫ್ ಕ್ಲಬ್ ಹಾಗೂ ರಾಜ್ಯ ಸರ್ಕಾರದ ನಡುವೆ ಕಾನೂನು ಸಮರ ನಡೆದಿತ್ತು. ಬಳಿಕ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಸರ್ಕಾರದ ಪರ ತೀರ್ಪು ನೀಡಿತ್ತು. ತೀರ್ಪು ಪ್ರಶ್ನಿಸಿ ಟರ್ಫ್ ಕ್ಲಬ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಇದೀಗ ರಾಜ್ಯ ಸರ್ಕಾರ ಟರ್ಫ್ ಕ್ಲಬ್ ನ ಮಾಸಿಕ ಪರವಾನಗಿ ನವೀಕರಣ ಮಾಡಲು ನಿರಾಕರಿಸಿದೆ. ಅಲ್ಲದೇ ಹೈಕೋರ್ಟ್ ಆದೇಶವನ್ನು ಒಪ್ಪಬೇಕು ಹಾಗೂ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಮೇಲ್ಮನವಿಯನ್ನು ಹಿಂಪಡೆಯಬೇಕು ಎಂದು ಸರ್ಕಾರ ಸೂಚಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಟರ್ಫ್ ಕ್ಲಬ್ ನಲ್ಲಿ ನಡೆಯುತ್ತಿದ್ದ ರೇಸಿಂಗ್ ಚಟುವಟಿಕೆ ಸೇರಿದಂತೆ ಎಲ್ಲಾ ಚಟುವಟಿಕೆಗಳು ಬಂದ್ ಆಗಿವೆ.