ಬೆಂಗಳೂರು: ಉದ್ಯೋಗಾವಕಾಶ, ವೇತನ ವೃದ್ಧಿಯಲ್ಲಿ ದೇಶದಲ್ಲೇ ಬೆಂಗಳೂರು ನಂಬರ್ ಒನ್ ಸ್ಥಾನದಲ್ಲಿದೆ. ಕರ್ನಾಟಕ ಅಭಿವೃದ್ಧಿ ಮಾದರಿ ಆಡಳಿತದ ಇನ್ನೊಂದು ಮೈಲುಗಲ್ಲಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ರಾಜ್ಯವನ್ನು ಬಂಡವಾಳ ಹೂಡಿಕೆಯ ಪ್ರಶಸ್ತ ತಾಣವಾಗಿಸಿದ ನಮ್ಮ ಸರ್ಕಾರದ ಪ್ರಯತ್ನಗಳು ಹಾಗೂ ಯುವ ಜನರಿಗೆ ಕೈಗಾರಿಕೆಗಳು ಮತ್ತು ಉದ್ದಿಮೆಗಳಲ್ಲಿ ಬೇಡಿಕೆಯಿರುವ ಕೌಶಲ್ಯಾಧಾರಿತ ತರಬೇತಿ ನೀಡುತ್ತಿರುವುದರ ಪರಿಣಾಮ ಉದ್ಯೋಗಾವಕಾಶ ಮತ್ತು ವೇತನ ವೃದ್ಧಿಯಲ್ಲಿ ಬೆಂಗಳೂರು ದೇಶದಲ್ಲೇ ನಂಬರ್ 1 ಸ್ಥಾನಕ್ಕೇರಿದೆ ಎಂದು ತಿಳಿಸಿದ್ದಾರೆ.
ಟೀಮ್ ಲೀಸ್ ಸರ್ವೀಸಸ್ ನ ಉದ್ಯೋಗ ಮತ್ತು ವೇತನ ವರದಿಯಲ್ಲಿ ಬೆಂಗಳೂರಿನ ಸರಾಸರಿ ವೇತನ ಹೆಚ್ಚಳ 9.3% ಹಾಗೂ ಸರಾಸರಿ ಏಕೀಕೃತ ಮಾಸಿಕ ಸಂಬಳ 29,500 ರೂ.ಇದ್ದು, ಇದು ಇತರೆ ಎಲ್ಲಾ ನಗರಗಳಿಗಿಂತ ಗರಿಷ್ಠ ಮಟ್ಟದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.