ಬೆಂಗಳೂರು: ಡ್ರಾಪ್ ಕೊಡುತ್ತೇವೆ ಎಂದು ಹೇಳಿ ಕಾರು ಹತ್ತಿಸಿಕೊಂಡು ಒಳ್ಳೆಯವರಂತೆ ಮಾತನಾಡಿ ಕೆಲ ದೂರ ಹೋಗುತ್ತಿದ್ದಂತೆ ಲಾಕ್ ಮಾಡಿ ಹಣ, ಒಡವೆ ದೋಚುತ್ತಿದ್ದ ಖತರ್ನಾಕ್ ದರೋಡೆ ಕೋರರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ರಾತ್ರಿ ವೇಳೆ ಬಸ್, ಕ್ಯಾಬ್ ಸಿಗುತ್ತಿಲ್ಲ ಎಂದು ಪರದಾಡುವ ಜನರು ಸಿಕ್ಕ ಸಿಕ್ಕ ವಾಹನಗಳಲ್ಲಿ ಡ್ರಾಪ್ ತೆಗೆದುಕೊಳ್ಳುವ ಮುನ್ನ ಎಚ್ಚರವಹಿಸಬೇಕು. ಬೆಂಗಳೂರಿನಲ್ಲಿ ಡ್ರಾಪ್ ನೆಪದಲ್ಲಿ ದರೋಡೆ ಮಾಡುವ ಗ್ಯಾಂಗ್ ಸಕ್ರಿಯವಾಗಿದ್ದು, ಚೆನ್ನಾಗಿ ಮಾತನಾಡಿ ಮಾನವೀಯತೆ ಮೆರೆಯುವವರಂತೆ ನಾಟಕವಾಡಿ ಜನರನ್ನು ಕಾರಿನಲ್ಲಿ ಹತ್ತಿಸಿಕೊಂಡು ಬಳಿಕ ಲಾಕ್ ಮಾಡಿ ಹಣ ದೋಚಿತ್ತಿದ್ದಾರೆ.
ಡ್ರಾಪ್ ಕೊಡುತ್ತೇವೆ ಎಂದು ಕಾರಿನಲ್ಲಿ ಹತ್ತಿಸಿಕೊಂಡು ಕೆಲ ದೂರ ಹೋಗುತ್ತಿದ್ದಂತೆ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಹಿಂದಿನ ಸೀಟ್ ನಿಂದ ಕತ್ತು ಲಾಕ್ ಮಾಡಿ, ಚಾಕು ತೋರಿಸಿ, ಹಲ್ಲೆ ಮಾಡಿ ಹಣ, ಒಡವೆ ದೋಚಿ ಪರಾರಿಯಾಗುತ್ತಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸರು ಮೂವರು ದರೋಡೆಕೋರರನ್ನು ಬಂಧಿಸಿದ್ದಾರೆ.
ನಂಜುಂಡ, ಗಿರೀಶ್ ಹಾಗೂ ನವೀನ್ ಬಂಧಿತ ಆರೋಪಿಗಳು. ಈ ಗ್ಯಾಂಗ್ ಎಲ್ಲೋ ಬೋರ್ಡ್ ಕಾರನ್ನು ಬಳಸಿಕೊಂಡು ಮೂರು ದಿನಗಳಲ್ಲಿ ಮೂರು ದರೋಡೆ ಕೃತ್ಯವೆಸಗಿತ್ತು. ಗೊರಗುಂಟೆಪಾಳ್ಯ, ಸುಮ್ಮನಹಳ್ಳಿ, ಅನ್ನಪೂರ್ಣೇಶ್ವರಿ ನಗರದಲ್ಲಿ ಡ್ರಾಪ್ ಕೊಡುವುದಾಗಿ ಹೇಳಿ ಜನರನ್ನು ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಮನಸೋಇಚ್ಛೆ ಹಲ್ಲೆ ನಡೆಸಿ ಹಣ, ಒಡವೆ ದೋಚಿ ಪರಾರಿಯಾಗಿತ್ತು. ಅಲ್ಲದೇ ಗೂಗಲ್ ಪೇ, ಫೋನ್ ಪೇ ಮೂಲಕವೂ ಹಣ ವರ್ಗಾವಣೆ ಮಾಡಿಸಿಕೊಂಡು ದರೋಡೆ ಮಾಡುತ್ತಿದ್ದರು. ಇದೀಗ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಲ್ಲಿ ಓರ್ವ ಖಾಸಗಿ ಕಂಪನಿ ಕ್ಯಾಬ್ ಚಾಲಕ, ಮತ್ತೋರ್ವ ಆಟೋ ಡ್ರೈವರ್ ಎಂದು ತಿಳಿದುಬಂದಿದೆ.