ಶಿಮ್ಲಾ: ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಶಿಮ್ಲಾದ ಮನಾಲಿ ಅರಣ್ಯ ಪ್ರದೇಶದಲ್ಲಿ ಶವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ 35 ವರ್ಷದ ರಾಹುಲ್ ರಮೇಶ್ ಮೃತ ವ್ಯಕ್ತಿ. ಮನಾಲಿ ಅರಣ್ಯ ಪ್ರದೇಶದ ಜೋಗಿನಿ ಜಲಪಾತದ ಬಳಿ ಶವವಾಗಿ ಪತೆಯಾಗಿದ್ದಾರೆ. ರಾಹುಲ್ ರಮೇಶ್ ಮೃತದೇಹ ಮಂಗಳವಾರವೇ ರಕ್ಷಣಾ ತಂಡಕ್ಕೆ ಸಿಕ್ಕಿತ್ತು. ಆದರೆ ಶವದ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಇದೀಗ ಮೃತದೇಹದ ಗುರುತು ಪತ್ತೆಯಾಗಿದ್ದು, ಬೆಂಗಳೂರು ಮೂಲದವರು ಎಂಬುದು ದೃಢಪಟ್ಟಿದೆ.
ಕಡಿದಾದ ಬಂಡೆಯ ಮೇಲಿಂದ ಕಾಲು ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಬೃಹತ್ ಬಂಡೆಯ 400 ಮೀಟರ್ ದೂರದಲ್ಲಿ ರಾಹುಲ್ ಶವ ಪತ್ತೆಯಾಗಿದೆ ಎಂದು ಮನಾಲಿಯ ಡಿಎಸ್ ಪಿ ಕೆ.ಡಿ.ಶರ್ಮಾ ತಿಳಿಸಿದ್ದಾರೆ.
ರಾಹುಲ್ ಮ್ಯಾರಥಾನ್ ಸೋಲಾಂಗ್ ಸ್ಕೈಲ್ಟ್ರಾ ಸ್ಪರ್ಧೆಯಲ್ಲಿ ಭಗವಹಿಸಲು ಮನಾಲಿಗೆ ಬಂದಿದ್ದರು. ಭ್ರಿಗು ಸರೋವರದಿಂದ ಹಿಂತಿರುಗುತ್ತಿದ್ದಾಗ ಅವರು ದಾರಿ ತಪ್ಪಿದ್ದರು. ಸೆ.29ರಂದು ಅವರ ಮೊಬೈಲ್ ಜೋಗಿನಿ ಜಲಪಾತದ ಬಳಿ ಕಾಡಿನಲ್ಲಿ ಪತ್ತೆಯಾಗಿತ್ತು. ಅದರಲ್ಲಿದ್ದ ಫೋಟೋ, ಮೆಸೇಜ್ ಗಳನ್ನು ಪರಿಶೀಲಿಸಿದಾಗ ಸರೋವರದಿಂದ ಮರಳುವಾಗ ದಾರಿತಪ್ಪಿದ್ದಾರೆ ಎಂಬುದು ದೃಢವಾಗಿದೆ. ಈ ಬಗ್ಗೆ ರಾಹುಲ್ ರಮೇಶ್ ತನ್ನ ಸಹೋದರನಿಗೆ ಕಳುಹಿಸಿದ್ದ ಸಂದೇಶ ಮೊಬೈಲ್ ನಲ್ಲಿ ಪತ್ತೆಯಾಗಿದೆ ಎಂದು ಡಿಎಸ್ ಪಿ ಮಾಹಿತಿ ನೀಡಿದ್ದಾರೆ.