ಬೆಂಗಳೂರು : ಬೆಂಗಳೂರಿಗರೇ ಹುಷಾರ್…ನೀವು ಎಲ್ಲೆಂದರಲ್ಲಿ ಕಸ ಬಿಸಾಡಿದ್ರೆ ಬಿಬಿಎಂಪಿ 500 ರೂ. ದಂಡ ವಿಧಿಸಲಿದೆ.ಈ ಬಗ್ಗೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಖಡಕ್ ಸೂಚನೆ ನೀಡಿದ್ದು, ಕಸ ಹಾಕುವವರಿಗೆ 500 ರೂ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಎಲ್ಲೆಂದರಲ್ಲಿ ತ್ಯಾಜ್ಯ ಬೆಂಗಳೂರಿನ ಸೌಂದರ್ಯ ಹಾಳು ಮಾಡುತ್ತಿರುವವರನ್ನು ಪತ್ತೆ ಮಾಡಿ ದಂಡ ವಿಧಿಸಲಿದೆ. ಅಲ್ಲದೇ ಎಲ್ಲೆಂದರಲ್ಲಿ ಕಸ ಹಾಕುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ ನಂತಹ ಮಾರಕ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಈ ಕ್ರಮ ಕೈಗೊಂಡಿದೆ.
ಡೆಂಗ್ಯೂ ಬಂತು ಎಚ್ಚರ..!
ನೀರು ತುಂಬುವ ಡ್ರಂ, ಬಕೆಟ್, ತೊಟ್ಟಿ ಮತ್ತು ಇತರೆ ನೀರು ಸಂಗ್ರಹಿಸುವ ಪರಿಕರಗಳನ್ನು ಸ್ವಚ್ಚಗೊಳಿಸಬೇಕು ಮತ್ತು ಮಳೆ ನೀರು ಸಂಗ್ರಹವಾಗುವ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡಬೇಕು. ಹಾಗೂ ತಮ್ಮ ಮನೆ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡುವ ಮೂಲಕ ಡೆಂಗ್ಯೂ ನಿಯಂತ್ರಣದಲ್ಲಿ ತಮ್ಮ ಕೈಜೋಡಿಸಬೇಕೆಂದು ಸರ್ಕಾರ ಮನವಿ ಮಾಡಿದೆ.
ಪ್ರಸ್ತುತ ಮಳೆಗಾಲವಾಗಿದ್ದು ಡೆಂಗ್ಯು ಜ್ವರ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆ ಹೆಚ್ಚಿದ್ದು, ನಂತರದ ದಿನಗಳಲ್ಲಿ ರೋಗ ಪ್ರಸರಣ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆಯಿಂದ ಡೆಂಗ್ಯು ಜ್ವರ ನಿಯಂತ್ರಣ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಮನೆ ಮನೆಗೆ ಆಶಾ, ಅಂಗನವಾಡಿ, ಆರೋಗ್ಯ ಕಾಯಕರ್ತರು ತೆರಳಿ ಲಾರ್ವಾ ಸಮೀಕ್ಷೆ ಹಾಗೂ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.ಶಾಲಾ, ಕಾಲೇಜುಗಳಲ್ಲಿ ನೀರು ತುಂಬುವ ಪರಿಕರಗಳನ್ನು ಸ್ವಚ್ಚವಾಗಿ ತೊಳೆದು ಒಣಗಿಸಿ, ಪುನಃ ಭರ್ತಿ ಮಾಡಬೇಕು. ಅವಶ್ಯವಿರುವ ನೀರಿಗೆ ಮುಚ್ಚಬೇಕು. ಈಡಿಸ್ ಸೊಳ್ಳೆ ಶುದ್ದ ನೀರಿನಲ್ಲೇ ಉತ್ಪತ್ತಿಯಾಗುವ ಕಾರಣ ಈ ಎಲ್ಲ ಕ್ರಮಗಳನ್ನು ವಹಿಸಬೇಕು ಎಂದು ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.