
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಪುಂಡರ ಪುಂಡಾಟಕ್ಕೆ ಮಿತಿಯೇ ಇಲ್ಲದಂತಾಗಿದೆ. ಹಾಡಹಗಲೇ ಯುವಕನೊಬ್ಬನನ್ನು ಯುವಕರ ಗ್ಯಾಂಗ್ ವೊಂದು ಮನ ಬಂದಂತೆ ರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದಿರುವ ಘಟನೆ ಮಾರತ್ತಹಳ್ಳಿಯಲ್ಲಿ ನಡೆದಿದೆ.
ಹೆಚ್ ಎ ಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾರತ್ತಹಳ್ಳಿಯ ರೈಲ್ವೆ ಹಳಿ ಬಳಿಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಯುವಕನೊಬ್ಬನನ್ನು ಕೆಲ ಯುವಕರ ಗುಂಪು ಹಿಡಿದು ಮನಬಂದಂತೆ ದೊಣ್ಣೆ ಹಾಗೂ ಹೆಲ್ಮೆಟ್ ಗಳಿಂದ ಥಳಿಸಿದ್ದಾರೆ. ಹೊಡೆದ ಏಟಿಗೆ ಯುವಕನ ಬಾಯಲ್ಲಿ ರಕ್ತ ಸೋರುತ್ತಿದ್ದರೂ, ಕರುಣೆ ತೋರದ ಯುವಕರ ಗುಂಪು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ.
ಯುವಕರ ಅಮಾನವೀಯ ಕೃತ್ಯವನ್ನು ಇನ್ನೋರ್ವ ಯುವಕ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ. ಹಲ್ಲೆ ನಡೆಸಿರುವ ಗುಂಪಿನವರು ಯಾರು? ಮಾರಣಾಂತಿಕವಾಗಿ ಹಲ್ಲೆಗೊಳಗಾದ ಯುವಕ ಯಾರು? ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ಬೆಂಗಳೂರಿಗರನ್ನು ಬೆಚ್ಚಿಬೀಳಿಸುವಂತಿದೆ.