ಬೆಂಗಳೂರು: ಬೆಂಗಳೂರು ವಿಶ್ವ ವಿದ್ಯಾಲಯ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಬೆಂಗಳೂರು ವಿವಿ ಹಾಸ್ಟೇಲ್ ಊಟದಲ್ಲಿ ಹುಳಗಳು ಪತ್ತೆಯಾಗಿದ್ದು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ವಿಶ್ವ ವಿದ್ಯಾಲಯದ ಬಾಯ್ಸ್ ಹಾಸ್ಟೇಲ್ ನಲ್ಲಿ ಕಳಪೆ ಊಟ ನೀಡಲಾಗುತ್ತಿದೆ. ಇದಕ್ಕೆ ವಾರ್ಡನ್ ನಿರ್ಲಕ್ಷ್ಯವೇ ಕಾರಣ. ಊಟದಲ್ಲಿ ಹುಳಗಳು ಬರುತ್ತಿದ್ದು, ಇಂತಹ ಊಟಗಳನ್ನು ಸೇವಿಸಿದರೆ ಆರೋಗ್ಯದ ಗತಿ ಏನು? ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಣಮಟ್ಟದ ಆಹಾರ ನೀಡುವಂತೆ ಕೇಳಿದರೆ ವಿದ್ಯಾರ್ಥಿಗಳ ಮೇಲೆಯೇ ದಬ್ಬಾಳಿಕೆ ನಡೆಸುತ್ತಿದ್ದಾರೆ. ತಕ್ಷಣ ವಾರ್ಡನ್ ಅಮಾನತುಗೊಳಿಸಿ, ಗುಣಮಟ್ಟದ ಊಟವನ್ನು ನೀಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.