ಚೆನ್ನೈ: ಬೆಂಗಳೂರು ಪೊಲೀಸರ ಹೆಸರಲ್ಲಿ ನಕಲಿ ಟ್ವಿಟರ್ ಖಾತೆ ತೆರೆದ ಕಿಡಿಕೇಡಿಗಳು, ಐಪಿಎಲ್ ಪಂದ್ಯಗಳು ಮತ್ತು ಪ್ರತಿ ಪಂದ್ಯಗಳ ವೇಳೆ ಗಳಿಸಿದ ರನ್ ಗಳ ಕುರಿತು ಪೋಸ್ಟ್ ಮಾಡಿದ್ದಾರೆ. ಇದೀಗ ಈ ಟ್ವಿಟ್ಟರ್ ಪೋಸ್ಟ್ ಬೆಂಗಳೂರು ಪೊಲೀಸರ ಗಮನಕ್ಕೆ ಬಂದಿದ್ದು, ಆರೋಪಿಯನ್ನು ಹೆಡೆಮುರಿಕಟ್ಟಿದ್ದಾರೆ.
ಸೈಬರ್ ಕ್ರೈಂ ಠಾಣೆಯಲ್ಲಿ ಕಾನ್ಸ್ ಟೇಬಲ್ ರವಿ ಎಂಬುವವರು ನೀಡಿದ್ದ ದೂರಿನ ಮೇರೆಗೆ ತನಿಖೆ ನಡೆಸಿರುವ ಪೊಲೀಸರಿಗೆ ಆರೋಪಿ ಚೆನ್ನೈನಲ್ಲಿರುವುದು ಗೊತ್ತಾಗಿದೆ. ನಕಲಿ ಟ್ವಿಟರ್ ಖಾತೆಯಿಂದ ಪೋಸ್ಟ್ ಮಾಡುವ ಐಪಿ ವಿಳಾಸವನ್ನು ಪತ್ತೆ ಮಾಡಿದಾಗ ಆರೋಪಿ ತಮಿಳುನಾಡಿನ ಚೆನ್ನೈನ ಸೇತುಪಟ್ಟು ಪ್ರದೇಶದಲ್ಲಿರುವುದು ತಿಳಿದುಬಂದಿದೆ.
ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ಮಹೇಶ್ ಕುಮಾರ್ ಎಂಬಾತನೇ ನಕಲಿ ಟ್ವಿಟರ್ ಖಾತೆ ಸೃಷ್ಟಿಸಿ ಪೋಸ್ಟ್ ಮಾಡಿದ್ದ ಎಂಬುದು ಬಹಿರಂಗವಾಗಿದ್ದು, ಪೊಲೀಸರು ಮೆಡಿಕಲ್ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಈ ವೇಳೆ ಆತ ತಮಾಷೆಗಾಗಿ ಬೆಂಗಳೂರು ಪೊಲೀಸ್ ಹೆಸರಲ್ಲಿ ಟ್ವಿಟರ್ ಖಾತೆ ತೆರೆದು ಪೋಸ್ಟ್ ಮಾಡಿದ್ದೆ. ಇದು ನಿಜವಾದ ಟ್ವಿಟರ್ ನಂತೆ ಕಂಡಿದ್ದರಿಂದ ಜನರು ಫಾಲೋ ಮಡಲು ಆರಂಭಿಸಿದರು. ಲೈಕ್ ಹಾಗೂ ಶೇರ್ ಗಾಗಿ ಈ ಕೃತ್ಯ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ.
ವಿದ್ಯಾರ್ಥಿ ಮಹೇಶ್ ನನ್ನು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಿರುವ ಬೆಂಗಳೂರು ಪೊಲೀಸರು ಎಚ್ಚರಿಕೆ ನೀಡಿ, ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.