ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೆ ಆರಂಭದಿಂದಲೂ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟ್ ಒಂದು ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ.
ಎಕ್ಸ್ ಪ್ರೆಸ್ ವೇ ನಲ್ಲಿ ಯಾರೂ ಬರಬೇಡಿ ಹೆದ್ದಾರಿಯಲ್ಲಿ ದರೋಡೆಕೋರರಿದ್ದಾರೆ ಎಂದು ಅಮಿತ್ ಗೌಡ ಎಂಬುವವರು ಫೇಸ್ ಬುಕ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದು, ವಾಹನ ಕೆಟ್ಟು ನಿಂತ ಸಮಯದಲ್ಲಿ ಸಹಾಯ ಮಾಡುವ ನೆಪದಲ್ಲಿ ಬಂದು ಚಾಕು, ಕತ್ತಿ ತೋರಿಸಿ ಹಣ, ಚಿನ್ನಾಭರಣ ದರೋಡೆ ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಹೆದ್ದಾರಿಯಲ್ಲಿ ರಾತ್ರಿ ವೇಳೆ, ಮೊಳೆ ಬಡಿದಿರುವ ಮಣೆಯನ್ನು ರಸ್ತೆ ಮೇಲೆ ಹಾಕಿ, ವಾಹನ ಪಂಚರ್ ಆಗುವಂತೆ ಮಾಡಿ ದರೋಡೆ ಮಾಡುತ್ತಿದ್ದಾರೆ. ಶ್ರೀರಂಗಪಟ್ಟಣದಿಂದ ಕೆಂಗೇರಿವರೆಗೂ ಯಾವುದೇ ಅಂಗಡಿ, ಕಟ್ಟಡಗಳು ಇಲ್ಲ, ಸಹಾಯಕ್ಕಾಗಿ ಕರೆದರೂ, ಕಿರುಚಾಡಿದರೂ ಯಾರೂ ಬರಲ್ಲ. ಪೊಲೀಸರಿಗೆ ಮಾಹಿತಿ ನೀಡಿದರೆ ಉಡಾಫೆ ಉತ್ತರ ಕೊಡುತ್ತಾರೆ ಎಂದು ಪೋಸ್ಟ್ ಮಾಡಿದ್ದಾರೆ.
ಸಾರ್ವಜನಿಕರಲ್ಲಿ ಭಯ ಹುಟ್ಟಿಸುವಂತ ಪೋಸ್ಟ್ ಹಾಕಿರುವ ವ್ಯಕ್ತಿಗಾಗಿ ಇದೀಗ ಪೊಲೀಸರು ಶೋಧ ನಡೆಸಿದ್ದಾರೆ.