ಬೆಂಗಳೂರು: ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳ ನಿವಾರಣೆಗೆ ಐದು ಅಂಶಗಳನ್ನೊಳಗೊಂಡ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕಸದ ಸಮಸ್ಯೆ ನಿವಾರಣೆ
ರಸ್ತೆ ಗುಂಡಿ ಸಮಸ್ಯೆ
ಚರಂಡಿ, ಕಾಲುವೆ, ಕೆರಗಳ ಒತ್ತುವರಿ ತೆರವು
ಆಸ್ತಿ ತೆರಿಗೆ ಸಂಗ್ರಹ
ಪಾಲಿಕೆ ಆಸ್ತಿ ಸಂರಕ್ಷಣೆ – ಎಂಬ ಈ ಐದು ಅಂಶಗಳು “ಬ್ರಾಂಡ್ ಬೆಂಗಳೂರು” ನಿರ್ಮಾಣಕ್ಕೆ ಅಡಿಪಾಯದಂತಾಗುತ್ತವೆ.
ಬೆಂಗಳೂರಿನ ಜನರ ಬದುಕಿನ ಸುಧಾರಣೆಗೆ ಈ ಐದು ಅಂಶಗಳ ಕಾರ್ಯಕ್ರಮ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಪ್ರಾಮಾಣಿಕ ಹೆಜ್ಜೆಗಳನ್ನು ಇಡುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಜೊತೆಗೂಡಿ ಬೆಂಗಳೂರು ನಗರ ಪ್ರದಕ್ಷಿಣೆ ವೇಳೆ ಒಂದಷ್ಟು ಭಾಗಗಳಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಅನೇಕ ಸಮಸ್ಯೆಗಳು ಕಂಡು ಬಂದ ಕಾರಣ ಬಿಬಿಎಂಪಿ ವಲಯ ಅಧಿಕಾರಿಗಳು ಸೇರಿದಂತೆ ಬೆಂಗಳೂರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಸೂಚಿಸಲಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ಥಿ ಹಾಗೂ ನಗರದ ಎಲ್ಲಾ ಭಾಗಗಳಲ್ಲಿ ಸರಬರಾಜಾಗುವ ನೀರಿನ ಗುಣಮಟ್ಟದ ಪರೀಕ್ಷೆಯನ್ನು ಬಿಬಿಎಂಪಿ ನಡೆಸಬೇಕು ಹಾಗೂ ಗುಣಮಟ್ಟದ ಫಲಿತಾಂಶವನ್ನು ಬಿಡ್ಬ್ಲೂ ಎಸ್ ಎಸ್ ಬಿಗೆ ನೀಡಬೇಕು ಎಂದು ಹೇಳಿದರು.