ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆ, ಶೈಕ್ಷಣಿಕ ಮತ್ತು ಸಂಶೋಧಕರಿಗೆ ಜ್ಞಾನ ವಿನಿಮಯಕ್ಕೆ ಜಾಗತಿಕ ವೇದಿಕೆಯಾಗುವ ನಿಟ್ಟಿನಲ್ಲಿ ಹಾಗೂ ನ್ಯಾನೋ ವಿಜ್ಞಾನ ಮತ್ತು ನ್ಯಾನೋ ತಂತ್ರಜ್ಞಾನ ಕ್ಷೇತ್ರದ ಕೈಗಾರಿಕೆಗಳ ಅಭಿವೃದ್ಧಿಗೆ ನೆರವಾಗುವ ಪರಿಸರವನ್ನು ಸೃಷ್ಠಿಸುವ ಉದ್ದೇಶದೊಂದಿಗೆ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನವನ್ನು ಆಯೋಜಿಸಲಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆ. 3ರವರೆಗೆ ಕಳಿಂಗ 1, ದಿ ಲಲಿತ್ ನಲ್ಲಿ ಸಮ್ಮೇಳನ ಆಯೋಜಿಸಿದ್ದು, ಆ. 2ರಂದು ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ನ್ಯಾನೋ ತಂತ್ರಜ್ಞಾನದ ವಿಷನ್ ಗ್ರೂಪ್ ಗೌರವಾಧ್ಯಕ್ಷ ಪ್ರೊ. ಸಿಎನ್ಆರ್ ರಾವ್ ಉಪಸ್ಥಿತರಿರುವರು. ಡಿಸಿಎಂ ಡಿ.ಕೆ. ಶಿವಕುಮಾರ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ಬಯೋಕಾನ್ ಕಾರ್ಯನಿರ್ವಾಹಕ ಅಧ್ಯಕ್ಷರಾದ ಡಾ. ಕಿರಣ್ ಮಜುಂದಾರ್ ಶಾ ಭಾಗವಹಿಸಲಿದ್ದು, ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸುವರು.