ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ವರುಣಾರ್ಭಟಕ್ಕೆ ತತ್ತರಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ದೊಮ್ಮಲೂರಿನ ಆರ್ಮಿ ಕಾಂಪೌಂಡ್ ಕುಸಿದು ಬಿದ್ದಿದೆ. ಪರಿಣಾಮ ಅಕ್ಕಪಕ್ಕದ ಮನೆಗಳಿಗೆ, ದನಗಳ ಕೊಟ್ಟಿಗೆಗೆ ನೀರು ನುಗ್ಗಿದೆ. ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ ನಡುವೆ ಮನೆಗಳಿಗೆ ಏಕಏಕಿ ನೀರು ನುಗ್ಗಿದ್ದು, ಜನರು ಕಂಗಾಲಾಗಿದ್ದಾರೆ.
ಬೆಂಗಳೂರಿನಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮಾನ್ಯತಾ ಟೆಕ್ ಪಾರ್ಕ್ ಬಳಿ ಅಧ್ವಾನ ಸೃಷ್ಟಿಯಾಗಿದೆ. ಒಆರ್ ಆರ್ ಮುಖ್ಯ ರಸ್ತೆಯ ಮೇಲೆ ನದಿಯಂತೆ ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಿಲಿಕಾನ್ ಸಿಟಿಯ ಬಹುತೇಕ ರಸ್ತೆಗಳು ಹೊಳೆಯಂತಾಗಿದ್ದು, ವಾಹನ ಸವಾರರು ಪರದಾಡುವವಂತಾಗಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಆರ್.ಆರ್.ನಗರ, ಹೊಸಕೆರೆಹಳ್ಳಿ, ರಾಚೇನಹಳ್ಳಿ, ಕೆ.ಆರ್.ಮಾರುಕಟ್ಟೆ, ಹಲಸೂರು ಸೇರಿದಂತೆ ಹಲವೆಡೆ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಇನ್ನು ಹಲವೆಡೆ ರಸ್ತೆಗಳು ಕೆಸರುಗದ್ದೆಗಳಂತಾಗಿವೆ.