ಬೆಂಗಳೂರು: ಅನಧಿಕೃತ ಅಕ್ರಮ ಬಡಾವಣೆಗಳ ನಿವೇಶನಗಳನ್ನು ನೋಂದಣಿ ಮಾಡದಂತೆ ಸಬ್ ರಿಜಿಸ್ಟ್ರಾರ್ ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪತ್ರ ಬರೆದಿದೆ. ಗ್ರಾಹಕರು ದುಬಾರಿ ಬೆಲೆಗೆ ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಖರೀದಿಸಿ ಮುಂದೆ ತೊಂದರೆ ಅನುಭವಿಸುವುದನ್ನು ತಪ್ಪಿಸಲು ಬಿಡಿಎ ಈ ಕ್ರಮ ಕೈಗೊಂಡಿದೆ.
ಬೆಂಗಳೂರು ನಗರ ಮತ್ತು ಸುತ್ತಮುತ್ತ 279 ಅನಧಿಕೃತ ಬಡಾವಣೆಗಳನ್ನು ಗುರುತಿಸಿ ಪಟ್ಟಿ ಸಿದ್ಧಪಡಿಸಲಾಗಿದೆ. ಯಲಹಂಕ, ಆನೇಕಲ್, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ತಾಲೂಕುಗಳ ವಲಯಗಳಲ್ಲಿ ನೂರಾರು ಸರ್ವೇ ನಂಬರ್ ಗಳಲ್ಲಿ ಲೇಔಟ್ ರಚನೆಗೆ ಬಿಡಿಎ ಯಾವುದೇ ರೀತಿಯ ಅನುಮೋದನೆ ನೀಡದಿದ್ದರೂ ಕೆಲವು ಬಿಲ್ಡರ್ ಗಳು ಕಾನೂನು ಉಲ್ಲಂಘಿಸಿ ಅಕ್ರಮವಾಗಿ ಬಡಾವಣೆಗಳನ್ನು ನಿರ್ಮಿಸಿದ್ದಾರೆ.
ಈ ಅನಧಿಕೃತ ಬಡಾವಣೆಗಳನ್ನು ಗುರುತಿಸಿರುವ ಬಿಡಿಎ ಯಾವ ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ಗಳಲ್ಲಿ ಅನಧಿಕೃತ ಬಡಾವಣೆ ನಿರ್ಮಾಣವಾಗುತ್ತಿದೆ ಎಂಬುದನ್ನು ದಾಖಲೆ ಸಹಿತ ವರದಿ ಸಿದ್ದಪಡಿಸಿದೆ. ಇವುಗಳ ಪಟ್ಟಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಈ ರೀತಿಯ 279 ಅನಧಿಕೃತ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಈ ಬಡಾವಣೆಗಳಲ್ಲಿ 27 ಸಾವಿರಕ್ಕೂ ಹೆಚ್ಚು ನಿವೇಶನಗಳಿವೆ. ಇಂತಹ ಬಡಾವಣೆಗಳ ನಿವೇಶನಗಳನ್ನು ನೋಂದಣಿ ಮಾಡದಂತೆ ಸಬ್ ರಿಜಿಸ್ಟ್ರಾರ್ ಗೆ ಬಿಡಿಎ ಪತ್ರ ಬರೆದಿದೆ.