ಬೆಂಗಳೂರು : ಬೆಂಗಳೂರಿನಲ್ಲಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕಮ್ಮನಹಳ್ಳಿಯ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಕಾರ್ಮಿಕರು ಸಾವಿಗೀಡಾದ ಘಟನಾ ಸ್ಥಳಕ್ಕೆ ಡಿಸಿಎಂ ಡಿಕೆಶಿ ಭೇಟಿ ನೀಡಿ ಪರಿಶೀಲಿಸಿದರು.
. 60/40 ಜಾಗದಲ್ಲಿ ಈ ರೀತಿ ಅಕ್ರಮವಾಗಿ ಕಟ್ಟಡ ಕಟ್ಟಿರುವುದೇ ಮಹಾಪರಾಧ. ಮೇಲ್ನೋಟದಲ್ಲೇ ಕಟ್ಟಡದ ಮಾಲೀಕರು ಪ್ಲಾನ್ ಅಪ್ರೂವಲ್ ಇಲ್ಲದೇ ಕಟ್ಟಡ ಕಟ್ಟುತ್ತಿರುವುದು ತಿಳಿದುಬಂದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
21 ಮಂದಿ ಅವಶೇಷಗಳಡಿ ಸಿಲುಕಿದ್ದರು. 14 ಮಂದಿಯನ್ನು ರಕ್ಷಿಸಲಾಗಿದ್ದು, ಈ ಪೈಕಿ 7 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಿಕ್ಕವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಮೊದಲು ರಕ್ಷಣಾ ಕಾರ್ಯವನ್ನು ಪೂರ್ಣಗೊಳಿಸಿ ನಂತರ ಸೂಕ್ತ ಪರಿಹಾರ ನೀಡುತ್ತೇವೆ. NDRF, SDRF ರಕ್ಷಣಾ ತಂಡ, ಅಗ್ನಿಶಾಮಕ ದಳ, ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ.ಬೆಂಗಳೂರಿನಲ್ಲಿ ಅನುಮತಿ ಇಲ್ಲದೆ ಅಕ್ರಮವಾಗಿ ಕಟ್ಟಲಾಗಿರುವ ಕಟ್ಟಡಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಿದ್ದೇನೆ. ಈ ಘಟನೆ ನಮಗೊಂದು ಪಾಠ. ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸಬಾರದು ಈ ನಿಟ್ಟಿನಲ್ಲಿ ಕಟ್ಟಡಗಳಿಗೆ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ, ನಿರ್ಮಾಣ ಹಂತದ ಕಟ್ಟಡಗಳ ಮೇಲೆ ನಿಗಾ ಇಡಲು ತಂಡವನ್ನು ನಿಯೋಜಿಸಲಾಗುವುದು ಎಂದರು.