ಬೆಂಗಳೂರು: ಕಾವೇರಿ ನೀರಿಗಾಗಿ ರಾಜ್ಯಾದ್ಯಂತ ಪ್ರತಿಭಟನೆ ಭುಗಿಲೆದ್ದಿದ್ದು, ಸೆ.26ರಂದು ರಾಜಧಾನಿ ಬೆಂಗಳೂರು ಬಂದ್ ಗೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ ನೀಡಿದೆ. ಮಂಗಳವಾರ ಸಿಲಿಕಾನ್ ಸಿಟಿ ಬೆಂಗಳೂರು ಸಂಪೂರ್ಣ ಸ್ತಬ್ಧಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಸೆ.26ರಂದು ಕರೆ ನೀಡಿರುವ ಬೆಂಗಳೂರು ಬಂದ್ ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಮೂಲಕ ವಿಪಕ್ಷಗಳು ಬೆಂಗಳೂರು ಬಂದ್ ಗೆ ಸಾಥ್ ನೀಡಲಿದ್ದು, ಕಾವೇರಿಗಾಗಿ ಪ್ರತಿಭಟನೆ ಇನ್ನಷ್ಟು ಕಾವೇರುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಕಾವೇರಿ ನೀರಿಗಾಗಿ ಯಾವುದೇ ಸಂಘಟನೆಗಳು ಹೋರಾಟ ಮಾಡಿದರೂ ನಾವು ಬೆಂಬಲ ಕೊಡುತ್ತೇವೆ. ಕಾವೇರಿ ನೀರಿಗಾಗಿ ಹೋರಾಟ ಅನಿವಾರ್ಯ. ಹೀಗಾಗಿ ಬೆಂಗಳೂರು ಬಂದ್ ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.
ಸೆ.26 ಮಂಗಳವಾರದಂದು ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಬೆಂಗಳೂರು ಬಂದ್ ಗೆ ಕರೆ ನೀಡಿದ್ದು, ಶಾಲಾ-ಕಾಲೇಜುಗಳು, ಐಟಿ, ಬಿಟಿ ಕಂಪನಿಗಳು, ಕೈಗಾರಿಕೋದ್ಯಮಿಗಳು, ವ್ಯಾಪಾರ ವಹಿವಾಟು ನಡೆಸುವವರು, ಬೀದಿಬದಿ ವ್ಯಾಪಾರಿಗಳು ಅಂಗಡಿ ಮುಗ್ಗಟ್ಟುಗಳು ಸೇರಿದಂತೆ ಎಲ್ಲರೂ ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಕಾವೇರಿ ನೀರಿಗಾಗಿ ಹೋರಾಟಕ್ಕೆ ಸಹಕರಿಸಬೇಕು ಎಂದು ಕುರಬೂರು ಶಾಂತಕುಮಾರ್ ಕರೆ ನೀಡಿದ್ದಾರೆ.