ಫೆಡರೇಶನ್ ಆಫ್ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಅಸೋಸಿಯೇಷನ್ ಸೋಮವಾರ ಬೆಂಗಳೂರಿನಲ್ಲಿ ‘ಬಂದ್’ ಘೋಷಿಸಿದೆ. ಆಗಸ್ಟ್ 31 ರ ಗಡುವಿನೊಳಗೆ ತಮ್ಮ 28 ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸಾರಿಗೆ ಇಲಾಖೆ ವಿಫಲವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಯೋಜನೆಯಾದ ‘ಶಕ್ತಿ’ ಯೋಜನೆಯನ್ನು ಪ್ರಾರಂಭಿಸಿದ ನಂತರ ತಮ್ಮ ಆದಾಯದ 40% ಕ್ಕಿಂತ ಹೆಚ್ಚು ಕಳೆದುಕೊಂಡಿದ್ದಾರೆ ಎಂದು ಒಕ್ಕೂಟ ದೂರಿದೆ. ಈ ಹಿನ್ನೆಲೆ ಇಂದು ಬೆಂಗಳೂರು ಬಂದ್ ಗೆ ಖಾಸಗಿ ಒಕ್ಕೂಟ ಕರೆ ನೀಡಿದೆ.
ಬೆಂಗಳೂರಿನಲ್ಲಿ ರಸ್ತೆಗಿಳಿಯುವವರು ಇಂದು ಸ್ವಲ್ಪ ನೋಡಿಕೊಂಡು ರಸ್ತೆಗಿಳಿಯುವುದು ಒಳಿತು. ಯಾಕೆಂದರೆ ಕೆಲವು ಪ್ರದೇಶಗಳಲ್ಲಿ ಇಂದು ವಾಹನ ಸಂಚಾರ ನಿರ್ಬಂಧಿಸಲಾಗಿದೆ.ಈ ಹಿನ್ನೆಲೆ ಬದಲಿ ಮಾರ್ಗ ಬಳಸುವಂತೆ ಸಂಚಾರಿ ಪೊಲೀಸ್ರು ವಾಹನ ಸವಾರರಲ್ಲಿ ಮನವಿ ಮಾಡಿದ್ದಾರೆ.
ಖೋಡೆ ಸರ್ಕಲ್ಗೆ ಬರುವ ವಾಹನಗಳು ಆರ್.ಆರ್.ಜಂಕ್ಷನ್ ಮೂಲಕ-ಕೃಷ್ಣ ಫ್ಲೋರ್ ಮಲ್ಲೇಶ್ವರಂ ಕಡೆ ತೆರಳುವುದು.ಗೂಡ್ ಶೆಡ್ ರಸ್ತೆ ಕಡೆಯಿಂದ ಬರುವ ವಾಹನಗಳು, ಜಿ.ಟಿ. ರಸ್ತೆ ಮುಖಾಂತರ ಸಂಗೊಳ್ಳಿ ರಾಯಣ್ಣ ಸರ್ಕಲ್- ಓಕಳಿಪುರಂ – ಸುಜಾತ ಮೂಲಕ ತೆರಳಲು ಅವಕಾಶ ನೀಡಲಾಗಿದೆ. ಹಾಗೂ ಆನಂದರಾವ್ ಸರ್ಕಲ್ ಕಡೆಯಿಂದ ಬರುವ ವಾಹನಗಳು, ಹಳೇ ಜೆ.ಡಿ.ಎಸ್. ರಸ್ತೆ ಹಾಗೂ ಶೇಷಾದ್ರಿಪುರಂ ರಸ್ತೆ ಕಡೆಗೆ ಹೋಗುವುದು.
ಮೈಸೂರು ಬ್ಯಾಂಕಿನಿಂದ ಬರುವ ವಾಹನಗಳು, ಪ್ಯಾಲೆಸ್ ರಸ್ತೆ- ಮಹಾರಾಣಿ ಅಂಡರ್ಪಾಸ್-ಬಸವೇಶ್ವರ ಸರ್ಕಲ್ ಮುಖಾಂತರ ಸಂಚರಿಸಲು ಪೊಲೀಸರು ಮನವಿ ಮಾಡಿದ್ದಾರೆ. ಆನಂದರಾವ್ ಸರ್ಕಲ್ ಕಡೆಯಿಂದ ಬರುವ ವಾಹನಗಳು: ಹಳೆ ಜೆಡಿಎಸ್ ರಸ್ತೆ ಹಾಗೂ ಶೇಷಾದ್ರಿಪುರಂ ರಸ್ತೆ ಕಡೆಗೆ ಹೋಗಬೇಕು.
ಈ ಬಗ್ಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ನಗರದಲ್ಲಿ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ. ಕಾನೂನು ಬಾಹಿರ ಕೃತ್ಯಕ್ಕೆ, ಶಾಂತಿ ಕದಡುವ ಯತ್ನ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.