ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರು ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಆಗಾಗ ಮೂಡುತ್ತಲೇ ಇರುವಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಆಟೋ ಚಾಲಕನೊಬ್ಬ ಮಹಿಳಾ ಪ್ರಯಾಣಕಿಯೊಂದಿಗೆ ದುರ್ವರ್ತನೆ ತೋರಿರುವ ಘಟನೆ ನಡೆದಿದೆ.
ಮಹಿಳಾ ಪ್ರಯಾಣಿಕರೊಬ್ಬರು ನಿನ್ನೆ ರಾತ್ರಿ ನಮ್ಮ ಯಾತ್ರಿ ಆಪ್ ಮೂಲಕ ಹೊರಮಾವಿನಿಂದ ಥಣಿಸಂದ್ರಕ್ಕೆ ಆಟೋ ಬುಕ್ ಮಾಡಿದ್ದರು. ಮಹಿಳೆ ಆಟೋ ಹತ್ತಿ ಸ್ವಲ್ಪ ದೂರ ಚಲಿಸುತ್ತಿದ್ದಂತೆ ಆಟೋ ಚಾಲಕ ನಿಗದಿತ ಸ್ಥಳಕ್ಕೆ ಹೋಗದೇ ಹೆಬ್ಬಾಳದತ್ತ ಆಟೋ ತಿರುಗಿಸಿದ್ದಾನೆ. ಪ್ರಶ್ನೆ ಮಾಡಿದ್ದಕ್ಕೆ ಅವಾಚ್ಯವಾಗಿ ನಿಂದಿಸಿದ್ದಾನೆ. ಆಟೋ ನಿಲ್ಲಿಸುವಂತೆ ಮಹಿಳೆ ಹೇಳಿದರೂ ಆಟೋ ನಿಲ್ಲಿಸದೇ ಕರೆದೊಯ್ದಿದ್ದಾನೆ.
ಈ ವೇಳೆ ಮಹಿಳೆ ಆಟೋ ನಿಲ್ಲಿಸುವಂತೆ ಕಿರುಚುತ್ತಿದ್ದಂತೆ ಆಟೋ ನಿಲ್ಲಿಸಲ್ಲ ಬೇಕಿದರೇ ಆಟೊದಿಂದ ಜಿಗಿಯಿರಿ ಎಂದಿದ್ದಾನೆ. ಇದರಿಂದ ಆತಂಕಕ್ಕೀಡಾದ ಮಹಿಳೆ ಆಟೋದಿಂದ ಜಿಗಿದಿದ್ದಾರೆ, ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸದ್ಯ ಬಚಾವ್ ಆಗಿದ್ದಾರೆ. ಆಟೋ ಚಾಲಕನ ದುರ್ವರ್ತನೆ ಬಗ್ಗೆ ಮಹಿಳೆಯ ಪತಿ ಸಾಮಾಜಿಕ ಜಾಲತಾಣಗಳಲ್ಲಿ ಅಳಲು ತೋಡಿಕೊಂಡಿದ್ದು, ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.