ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಖ್ಯಾತಿಯ ಬೆಂಗಳೂರು ಏರ್ ಶೋಗೆ ಇಂದು ಅದ್ದೂರಿ ಚಾಲನೆ ಸಿಕ್ಕಿದೆ. ಯಲಹಂಕದ ವಾಯುನೆಲೆಯಲ್ಲಿ ಇಂದಿನಿಂದ 4 ದಿನಗಳ ಕಾಲ ವೈಮಾನಿಕ ಪ್ರದರ್ಶನ ನಡೆಯಲಿದೆ.
ʼರನ್‌ವೇ ಟು ಬಿಲಿಯನ್ ಅಪಾರ್ಚುನಿಟಿಸಿ’ ಟ್ಯಾಗ್ ಲೈನ್‌ನಲ್ಲಿ ಏರ್‌ಶೋ-2025 ಆಯೋಜಿಸಲಾಗಿದೆ. ನೋಡುಗರ ಹೃದಯಬಡಿತ ಹೆಚ್ಚಿಸುವ ವೈಮಾನಿಕ ಕಸರತ್ತು, ವೈಮಾನಿಕ ಮತ್ತು ಬಾಹ್ಯಾಕಾಶ ಉದ್ದಿಮೆ, ಉದ್ಯಮಿಗಳ ಮುಖಾಮುಖಿಗೆ ವೇದಿಕೆ ಆಗಲಿದೆ.
ಸುದ್ದಿಗೋಷ್ಠಿಯಲ್ಲಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವೈಮಾನಿಕ ಪ್ರದರ್ಶನದ ರೂಪುರೇಷೆಗಳ ಮಾಹಿತಿ ನೀಡಿದರು. ಇದು ಕೇವಲ ತಂತ್ರಜ್ಞಾನ-ಕೌಶಲ ತೋರಿಸಲು ಇರುವ ಪ್ರದರ್ಶನವಲ್ಲ. ಬದಲಿಗೆ ಕೋಟ್ಯಾಂತರ ಯುವಮನಸುಗಳಲ್ಲಿ ಸ್ಫೂರ್ತಿಯ ಸೆಲೆ ಬಿತ್ತುವ ವೇದಿಕೆ ಆಗಲಿದೆ. ಬೆಂಗಳೂರು ಏರ್ ಶೋ ಎಂದೇ ಖ್ಯಾತವಾಗಿರುವ ವೈಮಾನಿಕ ಪ್ರದರ್ಶನದ 15ನೇ ಆವೃತ್ತಿ ಎಲ್ಲ ರೀತಿಯಲ್ಲೂ ಹಿಂದೆಂದಿಗಿಂತ ದೊಡ್ಡದಾಗಿ ಇರಲಿದೆ. ಯಲಹಂಕದಲ್ಲಿ ಇರುವ ವಾಯುಪಡೆಯ ವಿಶಾಲ ಮೈದಾನದಲ್ಲಿ ಪ್ರದರ್ಶನಕ್ಕೆ ಎಲ್ಲ ಸಿದ್ಧತೆಗಳೂ ಅಂತಿಮವಾಗಿವೆ” ಎಂದಿದ್ದಾರೆ.
ಏರ್‌ಶೋದಲ್ಲಿ ರಷ್ಯಾ ಮತ್ತು ಅಮೆರಿಕನ್ ಫೈಟ್ ಏರ್‌ಕ್ರಾಫ್ಟ್‌ಗಳು ಭಾಗಿ ಆಗಲಿವೆ. 100 ದೇಶಗಳ 900ಕ್ಕೂ ಹೆಚ್ಚು ರಕ್ಷಣಾ ಸಾಮಗ್ರಿ ಉತ್ಪಾದಕರು ಭಾಗವಹಿಸಲಿದ್ದಾರೆ. ವಿವಿಧ ಕಂಪನಿಗಳ 100 ಸಿಇಒಗಳು, 50 ವಿದೇಶಿ ಒಎಂಎಸ್ ಉಪಸ್ಥಿತರಿರಲಿದ್ದಾರೆ.
ಎಐ, ಸೈಬರ್ ಸೆಕ್ಯುರಿಟಿ, ಡೋನ್ ಮತ್ತು ಗ್ಲೋಬಲ್ ಏರೋಸ್ಪೇಸ್ ಪ್ರದರ್ಶನವಿದೆ. ಆತ್ಮನಿರ್ಭರ ಭಾರತದ ಉತ್ಪನ್ನಗಳು ಇರಲಿದ್ದು 10 ಸೆಮಿನಾರ್‌ಳು ಆಯೋಜಿಸಲಾಗಿದೆ. ರಕ್ಷಣಾ ವಲಯದಲ್ಲಿ ಹೂಡಿಕೆ, ಸಂಶೋಧನೆ, ಜಾಯಿಂಟ್ ವೆಂಚರ್, ರಕ್ಷಣಾ ವಲಯ ಬಗ್ಗೆ ಚರ್ಚೆ ಆಗಲಿದೆ.
ಮೇಕ್ ಇನ್ ಇಂಡಿಯಾ ಅಡಿಯಲ್ಲಿ ತಯಾರಾಗಿರುವ ಯುದ್ಧ ವಿಮಾನಗಳ ಪ್ರದರ್ಶನ ಇರುತ್ತದೆ ಮತ್ತು ವಿದೇಶಗಳಿಂದ ಸಾಕಷ್ಟು ಯುದ್ಧ ವಿಮಾನಗಳು ಪ್ರದರ್ಶನಗೊಳ್ಳಲಿದೆ. ಇನ್ನೂ ಈ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, 43ದೇಶಗಳ ಸೇನಾ ಮುಖ್ಯಸ್ಥರು ಭಾಗಿಯಾಗಿದ್ದಾರೆ. 7 ಲಕ್ಷಕ್ಕೂ ಅಧಿಕ ಜನ ಏರ್ ಶೋ ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.