
ಚಾಂಪಿಯನ್ಸ್ ಟ್ರೋಫಿ ಎ ಗುಂಪಿನ ಎರಡನೇ ಪಂದ್ಯದಲ್ಲಿ ಇಂದು ಪಾರಂಪರಿಕ ಎದುರಾಳಿಗಳಾದ ಪಾಕಿಸ್ತಾನ, ಭಾರತ ಮುಖಾಮುಖಿಯಾಗಿವೆ. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿರುವ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ದುಕೊಂಡಿದೆ.
ಟೂರ್ನಿಯ ಹೈವೋಲ್ಟೇಜ್ ಪಂದ್ಯವೆಂದೇ ಹೇಳಲಾಗಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಕುರಿತಾಗಿ ಭಾರೀ ಕುತೂಹಲ ಮೂಡಿದೆ. ಭಾರತದ ಗೆಲುವಿಗಾಗಿ ಕೋಟ್ಯಂತರ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳು ಟಿವಿ ಮುಂದೆ ಕುಳಿತಿದ್ದಾರೆ. ಬಹುತೇಕ ಎಲ್ಲರ ಮನೆಗಳಲ್ಲಿ ಮನೆ ಮಂದಿಯೆಲ್ಲ ಪಂದ್ಯ ನೋಡುತ್ತಿದ್ದು, ಕೆಲವೆಡೆ ಸ್ನೇಹಿತರು ಒಂದೆಡೆ ಸೇರಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇವತ್ತು ಭಾನುವಾರ ರಜೆ ದಿನವಾಗಿರುವುದರಿಂದ ಕೆಲವು ಹೋಟೆಲ್, ಬಾರ್, ಕ್ಲಬ್ ಗಳಲ್ಲಿ ಭಾರತ –ಪಾಕಿಸ್ತಾನ ಹೈವೋಲ್ಟೇಜ್ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಇಡೀ ದೇಶದಲ್ಲೇ ಭಾರತ –ಪಾಕ್ ತಂಡಗಳ ನಡುವಿನ ಪಂದ್ಯದ ಬಗ್ಗೆ ಭಾರೀ ಕುತೂಹಲ ಮೂಡಿದ್ದು, ಜನ ಟಿವಿ ಮುಂದೆ ಕುಳಿತಿದ್ದು, ಮೊದಲೇ ಭಾನುವಾರದ ರಜೆ ಜೊತೆಗೆ ಹೈವೋಲ್ಟೇಜ್ ಮ್ಯಾಚ್ ನೋಡುವಲ್ಲಿ ಜನ ನಿರತರಾಗಿರುವುದರಿಂದ ಬಹುತೇಕ ಎಲ್ಲೆಡೆ ಬಂದ್ ವಾತಾವರಣ ಕಂಡು ಬಂದಿದೆ.
ಅನೇಕ ನಗರ, ಪಟ್ಟಣಗಳಲ್ಲಿ ಮಾತ್ರವಲ್ಲದೇ ಹಳ್ಳಿಗಳಲ್ಲೂ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿವೆ. ಪ್ರಮುಖ ವಹಿವಾಟು ಕೇಂದ್ರಗಳು, ಮಾರುಕಟ್ಟೆಗಳಲ್ಲಿಯೂ ಜನ, ವಾಹನ ಸಂಚಾರ ವಿರಳವಾಗಿದೆ. ವರ್ಷಗಳ ನಂತರ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿರುವುದರಿಂದ ಸಹಜವಾಗಿಯೇ ಕುತೂಹಲ ಹೆಚ್ಚಾಗಿದೆ.
ಪಾಕಿಸ್ತಾನ ಎದುರಿನ ಹಿಂದಿನ ಆರು ಪಂದ್ಯಗಳಲ್ಲಿ ಐದರಲ್ಲಿ ಭಾರತ ಜಯ ಗಳಿಸಿದ್ದು, ಇಂದಿನ ಪಂದ್ಯವನ್ನು ಕೂಡ ಗೆಲ್ಲುವ ವಿಶ್ವಾಸದಲ್ಲಿದೆ. 2017ರ ಚಾಂಪಿಯನ್ ಟ್ರೋಫಿ ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.