ಚಿಕ್ಕಮಗಳೂರು : ಒತ್ತುವರಿ ತೆರವು ಖಂಡಿಸಿ ಇಂದು ಕಳಸ ಬಂದ್ ಗೆ ಕರೆ ನೀಡಲಾಗಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಮಲೆನಾಡಿನ ಕೃಷಿಕರ ಸಾಗುವಳಿ ಭೂಮಿ ಖುಲ್ಲಾ ಮಾಡುವ ಅರಣ್ಯ ಇಲಾಖೆ ಪ್ರಯತ್ನದ ವಿರುದ್ಧ ಭಾರಿ ಹೋರಾಟ ನಡೆಯುತ್ತಿದೆ. ಕೊಪ್ಪ, ಚಿಕ್ಕಮಗಳೂರಿನಲ್ಲಿ ನಡೆದ ಭಾರಿ ಪ್ರತಿಭಟನೆ ನಂತರ ಇಂದು ಕಳಸ ಬಂದ್ ಮಾಡಿ ಪ್ರತಿಭಟನೆ ನಡೆಸಲಿವೆ.
ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಶೇ. 99ರಷ್ಟು ಜನತೆ ಕಾಫಿ, ಅಡಿಕೆ, ಭತ್ತ,ಕಾಳುಮೆಣಸು, ತೆಂಗು, ಏಲಕ್ಕಿ, ಬಾಳೆ, ರಾಗಿ, ಜೋಳ ಇತ್ಯಾದಿ ಬೆಳೆಗಳನ್ನೊಳಗೊಂಡ ಕೃಷಿಯನ್ನು ಅವಲಂಬಿಸಿದ್ದಾರೆ. ಸುಮಾರು 15 ಲಕ್ಷ ಕುಟುಂಬಗಳು ಕೃಷಿಯನ್ನು ಅವಲಂಬಿಸಿ, ಜೀವನ ಸಾಗಿಸುತ್ತಿವೆ. ತಲೆತಲಾಂತರಗಳಿಂದ ರೈತ ಬೆಳೆಗಾರರು ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ಕಾಲಕಾಲಕ್ಕೆ ತಕ್ಕಂತೆ ಅಂದಿನಆಡಳಿತ ವ್ಯವಸ್ಥೆಯು ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬಂದವರಿಗೆ ಹಕ್ಕುದಾರಿಕೆ ನೀಡುತ್ತಾಬಂದಿದ್ದು ಸರಿಯಷ್ಟೆ. ಆದರೆ ಏಕಾಏಕಿ ರೈತರನ್ನು ಭೂಗಳ್ಳರೆಂದು ಬಿಂಬಿಸಿ, ತೆರವುಗೊಳಿಸಲು ಮುಂದಾಗಿ ರೈತಬೆಳೆಗಾರರ ಮೇಲೆ ದೌರ್ಜನ್ಯವೆಸಗುತ್ತಿವೆ. ಅನ್ನದಾತನ ಮೇಲೆ ದೌರ್ಜನ್ಯವೆಸಗುತ್ತಿರುವುದು ನಿಜಕ್ಕೂ ವಿಪರ್ಯಾಸ.
1964ರಲ್ಲಿ ಕರ್ನಾಟಕ ಅರಣ್ಯ ಕಾಯಿದೆ ಜಾರಿಗೆ ಬಂದಿದ್ದು, ಆ ಸಮಯದಲ್ಲಿ 30 ಕೋಟಿ ಜನಸಂಖ್ಯೆ ಇದ್ದು, ಈಗಜನಸಂಖ್ಯೆ 140 ಕೋಟಿ ಆಗಿದೆ. ಆದ್ದರಿಂದ ಜನಸಂಖ್ಯೆ ಆಧಾರದ ಮೇಲೆ ಈ ಕಾಯಿದೆಯನ್ನು ತಿದ್ದುಪಡಿಮಾಡಬೇಕು.
ರೈತರು ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡಿರುವ ಉದ್ದೇಶ, ಜೀವನ ನಿರ್ವಹಣೆಯೇ ಹೊರತು, ಭೂ ಕಬಳಿಕೆಯಲ್ಲ. ಸರ್ಕಾರದ ಬಂಜರು ಭೂಮಿಯನ್ನು ಸಾಗುವಳಿ ಮಾಡಿ, ದೇಶಕ್ಕೆ ಆದಾಯ ತಂದುಕೊಟ್ಟು, ಶೇ.99.99 ರಷ್ಟು ಗ್ರಾಮೀಣ ಜನತೆ ಉದ್ಯೋಗ ಕಲ್ಪಸಿಕೊಂಡು ಪರಿಸರ ಸಂರಕ್ಷಣೆಗೆ ಒತ್ತು ನೀಡುತ್ತಿರುವ ರೈತ ಬೆಳೆಗಾರರು ಉತ್ತಮ ಸಮಾಜದ ರೂವಾರಿಗಳು, ಸರ್ಕಾರಿ ಜಮೀನಿನಲ್ಲಿ ಸಾಗುವಳಿಯನ್ನು ತೆರವುಗೊಳಿಸುವುದ ರಿಂದ ರಾಷ್ಟ್ರದ ಆದಾಯ ಕಡಿಮೆಯಾಗಿ, ನಿರುದ್ಯೋಗ ಸಮಸ್ಯೆ ಎದುರಾಗಲಿವೆ. ಹಲವಾರು ಬಡ ಕುಟುಂಬಗಳು ಬೀದಿಗೆ ಬೀಳಲಿವೆ. ಸಮಾಜಘಾತಕ ಚಟುವಟಿಕೆಗಳು ಅಧಿಕಗೊಳ್ಳಲಿವೆ. ಬ್ಯಾಂಕ್ನಲ್ಲಿ ಭೂ ಅಭಿವೃದ್ಧಿಗಾಗಿ ರೈತರು ಮಾಡಿರುವ ಸಾಲಗಳನ್ನು ತೀರಿಸಲಾಗದೆ ಬ್ಯಾಂಕ್ ಖಾತೆಗಳು ಎನ್.ಪಿ.ಎ. ಆಗುವ ಮೂಲಕ ಆರ್ಥಿಕ ಅಸಮತೋಲನ ಉಂಟಾಗಲಿದೆ ಎಂದು ರೈತರು ಹೇಳಿದ್ದಾರೆ.