ಹುಬ್ಬಳ್ಳಿ: ವಿದ್ಯುತ್ ದರ ಅಸಹಜ ಏರಿಕೆ ವಿರೋಧಿಸಿ ಜೂನ್ 22 ರಂದು ರಾಜ್ಯದ್ಯಂತ ಒಂದು ದಿನದ ಬಂದ್ ಗೆ ಕರೆ ನೀಡಲಾಗಿದೆ.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಇತರೆ ಎಲ್ಲಾ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗಳು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ಜೊತೆಗೂಡಿ ಬಂದ್ ಗೆ ಕರೆ ನೀಡಲಾಗಿದೆ. ಎಸ್ಕಾಂ ವಿದ್ಯುತ್ ಶುಲ್ಕದಲ್ಲಿ ಅಸಹಜ ಬೆಲೆ ಏರಿಕೆ ವಿರೋಧಿಸಿ ಎಲ್ಲಾ ಕೈಗಾರಿಕೆಗಳು ಮತ್ತು ವ್ಯಾಪಾರಸ್ಥರು ಜೂನ್ 22ರಂದು ತಮ್ಮ ವ್ಯವಹಾರ ಬಂದ್ ಮಾಡಲು ಮನವಿ ಮಾಡಲಾಗಿದೆ.
ವಿದ್ಯುತ್ ಶುಲ್ಕ ಹೆಚ್ಚಳದಿಂದಾಗಿ ಸಾಮಾನ್ಯ ಜನ ಮತ್ತು ಕೈಗಾರಿಕೆಗಳ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಕಳೆದ 8 ದಿನಗಳಿಂದ ಸರ್ಕಾರಕ್ಕೆ ಗಂಭೀರತೆ ತಿಳಿಸುವ ಪ್ರಯತ್ನ ಮಾಡಲಾಗಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಜೂನ್ 22 ರಂದು ಒಂದು ದಿನದ ಬಂದ್ ಗೆ ಕರೆ ನೀಡಲಾಗಿದೆ ಎಂದು ಹೇಳಲಾಗಿದೆ.
ಸರ್ಕಾರದ ಗಮನ ಸೆಳೆಯಲು ಬಂದ್ ಗೆ ಕರೆ ನೀಡಲಾಗಿದ್ದು ವಿದ್ಯುತ್ ಶುಲ್ಕದಲ್ಲಿ ಕಡಿತ ಮಾಡುವಂತೆ ಮನವಿ ಮಾಡಿದ್ದೇವೆ ಎಂದು ಸಂಸ್ಥೆಯ ಉಪಾಧ್ಯಕ್ಷ ಸಂದೀಪ್ ಬಿಡಸಾರಿಯಾ, ಗೌರವ ಕಾರ್ಯದರ್ಶಿ ಪ್ರವೀಣ್ ಅಂಗಡಿ ಹೇಳಿದ್ದಾರೆ.