ವಿಶ್ವಖ್ಯಾತಿ ಪಡೆದಿರುವ ಟೈಟಾನಿಕ್ ಚಲನಚಿತ್ರವನ್ನು ನೋಡಿದವರಿಗೆ ಈ ದೃಶ್ಯ ನೆನಪಿರಬಹುದು. ಕ್ರೂಸ್ ಮುಳುಗಲು ಪ್ರಾರಂಭಿಸಿದ ಸಂದರ್ಭದಲ್ಲಿ ಪ್ರಯಾಣಿಕರನ್ನು ಶಾಂತಗೊಳಿಸಲು ಟೈಟಾನಿಕ್ನಲ್ಲಿರುವ ಮ್ಯೂಸಿಕ್ ಬ್ಯಾಂಡ್ ಸಂಗೀತ ಬಾರಿಸಲು ಪ್ರಾರಂಭಿಸಿತು.
ಹಡಗು ಮುಳುಗಿದಂತೆಯೇ ಸಂಗೀತವೂ ಜೋರಾಗಿ ಜನರಲ್ಲಿ ಆತಂಕವನ್ನು ಮರೆಮಾಚಲು ಪ್ರಯತ್ನಿಸಿತ್ತು. ಅಂಥದ್ದೇ ನೈಜ ಘಟನೆಯೊಂದು ನಡೆದಿದೆ.
ಮೆಕ್ಸಿಕನ್ ಮಾಲ್ನಲ್ಲಿ ರೆಕಾರ್ಡ್ ಮಾಡಲಾದ 2019 ರ ಹಳೆಯ ವಿಡಿಯೋ ಇದಾಗಿದ್ದು, ಇದೀಗ ಪುನಃ ವೈರಲ್ ಆಗಿದೆ. ಮಾಲ್ನಲ್ಲಿ ಬ್ಯಾಂಡ್ ನುಡಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಸಂಗೀತ ಮುಂದುವರೆದಂತೆ, ಮಾಲ್ನ ಮೇಲ್ಚಾವಣಿಯಿಂದ ನೀರು ಸುರಿಯುವುದನ್ನು ಮತ್ತು ನೆಲದ ಮೇಲೆ ನೀರು ಹರಿಯುವುದನ್ನು ಕಾಣಬಹುದು.
ಮೈ ಹಾರ್ಟ್ ವಿಲ್ ಗೋ ಆನ್ ಹಾಡಿನ ಭಾವಪೂರ್ಣ ರಾಗವನ್ನು ನುಡಿಸಲು ಬ್ಯಾಂಡ್ನವರು ಪ್ರಾರಂಭಿಸುತ್ತಾರೆ. ಅಲ್ಲಿ ನೆರೆದಿದ್ದವರು ನಗುವುದು ಮತ್ತು ಉಲ್ಲಾಸದಿಂದ ಕೂಡಿರುವುದನ್ನು ಕಾಣಬಹುದು. ಈ ವಿಡಿಯೋ ಪುನಃ ವೈರಲ್ ಆದರೂ ಲಕ್ಷಾಂತರ ಮಂದಿ ಇದನ್ನು ವೀಕ್ಷಿಸುತ್ತಿದ್ದು, ಹಲವು ರೀತಿಯ ಕಮೆಂಟ್ ಹಾಕುತ್ತಿದ್ದಾರೆ.