ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿ ವೀಕೆಂಡ್ ನಲ್ಲಿ ಒಂದೆಡೆ ರಾಮನಾಮ ಜಪ ಆರಂಭವಾಗಿದ್ದರೆ ಮತ್ತೊಂದೆಡೆ ಬನಶಂಕರಿ ದೇವಿ ಜಾತ್ರಾ ಸಂಭ್ರಮ ಮನೆ ಮಾಡಿದೆ. ಇಂದಿನಿಂದ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಬನಶಂಕರಿ ಅಮ್ಮನ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ.
ಬನಶಂಕರಿ ಅಮ್ಮನ 108ನೇ ಜಾತ್ರಾ ಮಹೋತ್ಸವ ಇದಾಗಿದ್ದು ಜನವರಿ 29ವರೆಗೆ ನಡೆಯಲಿದೆ. ಇಂದು ಮುಂಜಾನೆ 5 ಗಂಟೆಯಿಂದಲೇ ಬನಶಂಕರಿ ಅಮ್ಮನಿಗೆ ವಿಶೇಷ ಪೂಜೆ ಪುನಸ್ಕಾರಗಳು ಆರಂಭವಾಗಿವೆ. ಸುಪ್ರಭಾತ ಸೇವೆ, ವಿಶೇಷ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ನಡೆಯುತ್ತಿದೆ.
ಜನವರಿ 21ರಂದು ಶ್ರೀ ಲಕ್ಷ್ಮೀನಾರಾಯಣ ಹೃದಯ ಪಾರಾಯಣ, ಹೋಮ, ಧನ್ವಂತರಿ ಹೋಮ, ಜ.22ರಂದು ರುದ್ರಹೋಮ, ಸಂಜೆ 5 ಗಂಟೆಗೆ ಶ್ರೀ ಪರ್ವತ ಮಲ್ಲಿಕಾರ್ಜುನ ಸ್ವಾಮಿಗೆ ಬಿಲ್ವಾರ್ಚನೆ, ಜ.23ರಂದು ಶ್ರೀದುರ್ಗಾ ಹೋಮ, ಶ್ರೀ ಸೂಕ್ತ ಹೋಮ, ಶ್ರೀ ಸಾರಸ್ವತ ಹೋಮ, ಜ.24ರಂದು ನವಚಂಡಿಕಾ ಹೋಮ, ಮೂಲ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಜ.25ರಂದು ಬನದ ಹುಣ್ಣಿಮೆ ಅಂಗವಾಗಿ ಬೆಳಿಗ್ಗೆ 11:50ರಿಂದ 12:50ರವರೆಗೆ ರಥಾರೋಹಣ, ಸಂಜೆ 6 ಗಂಟೆಗೆ ಶಾಕಾಂಬರಿ ದೇವಿಗೆ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಇನ್ನು ಇಂದಿನಿಂದ ಬನಶಂಕರಿ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಬನಶಂಕರಿ ಅಮ್ಮನವರಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗಿದ್ದು, ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಬಂದು ಜನರು ಅಮ್ಮನ ದರ್ಶನ ಪಡೆಯುತ್ತಿದ್ದಾರೆ.