ಬೆಂಗಳೂರು: ಟೊಮೆಟೊ ಬಳಿಕ ಒಂದೊಂದೇ ತರಕಾರಿ ಬೆಲೆಗಳು ಏರುತ್ತಿದ್ದು, ಇದೀಗ ಬಾಳೆಹಣ್ಣಿನ ಬೆಲೆ ಗಗನಮುಖಿಯಾಗಿದೆ. ಶ್ರಾವಣ ಮಾಸ ಆರಂಭವಾಗಿರುವಾಗಲೇ ಬಾಳೆಹಣ್ಣಿನ ಬೆಲೆ ಹೆಚ್ಚಳವಾಗಿರುವುದು ಗ್ರಾಹಕರಿಗೆ ಬಿಸಿ ತಟ್ಟಿದೆ.
ಶ್ರಾವಣ ಮಾಸ ಹಬ್ಬಗಳ ಸೀಜನ್. ಬಾಳೆಹಣ್ಣು ಇಲ್ಲದೇ ಯಾವುದೇ ಪೂಜೆ, ವಿಶೇಷತೆಗಳು ನಡೆಯಲ್ಲ. ಈ ಹೊತ್ತಲ್ಲೇ ಬಾಳೆಹಣ್ಣಿನ ಬೆಲೆ ಶತಕ ದಾಟಿರುವುದು ಗ್ರಾಹಕರಿಗೆ ತಲೆನೋವಾಗಿ ಪರಿಣಮಿಸಿದೆ.
ಕೆಜಿ ಬಾಳೆಹಣ್ಣಿಗೆ 100 ರಿಂದ 140 ರೂಪಾಯಿ ಆಗಿದೆ. ಬೇಡಿಕೆ ಹಾಗೂ ಪೂರೈಕೆಯ ವ್ಯತ್ಯಾಸದಿಂದಾಗಿ ಬೆಲೆ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಹೊರ ರಾಜ್ಯಗಳಿಂದ ಪೂರೈಕೆ ಕಡೆಮೆ ಇರುವುದರಿಂದ ಏಲಕ್ಕಿ ಬಾಳೆಯ ಸಗಟು ಮಾರಾಟ ಬೆಲೆ ಪ್ರತಿ ಕೆಜಿಗೆ 80 ರೂಪಾಯಿ ಇದ್ದರೆ ಪಚ್ಚಬಾಳೆ 20 ರೂಪಾಯಿ ಇದೆ. ಆದರೆ ಸಾಗಣಿಕೆ ವೆಚ್ಚ ಸೇರಿಸಿ ಚಿಲ್ಲರೆ ಮಾರಾಟ ಬೆಲೆ 100ರಿಂದ 140 ರೂಪಾಯಿ ಆಗಿದೆ.
ಬೆಂಗಳೂರು ಎಪಿಎಂಸಿ ಘಟಕಕ್ಕೆ ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರಗಳಿಂದ ಬಾಳೆಹಣ್ಣು ಪೂರೈಕೆಯಾಗಬೇಕು ಆದರೆ ಉತ್ಪನ್ನಗಳು ನಗರ ತಲುಪುತ್ತಿಲ್ಲ. ವರಮಹಾಲಕ್ಷ್ಮೀ ಹಬ್ಬ, ನಾಗರ ಪಂಚಮಿ, ಓಣಂ, ಗಣೇಶ ಚತುರ್ಥಿ ಸೇರಿದಂತೆ ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಬಾಳೆಹಣ್ಣು ಬೇಡಿಕೆ ಹೆಚ್ಚಾಗುತ್ತಿದೆ ಆದರೆ ಪೂರೈಕೆಯಾಗದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ.