ಬೆಂಗಳೂರು: ಸಹೋದ್ಯೋಗಿ ಮಹಿಳಾ ವಕೀಲೆಗೆ ಲೈಂಗಿಕ ಕಿರುಕುಳ, ಜೀವ ಬೆದರಿಕೆ ಆರೋಪದಡಿ ದೇಶದ ಯಾವುದೇ ನ್ಯಾಯಾಲಯಗಳಲ್ಲಿ ವಕೀಲಿಕೆ ವೃತ್ತಿ ಮಾಡದಂತೆ ಬೆಂಗಳೂರಿನ ವಕೀಲ ಹೆಚ್. ಮಂಜುನಾಥ್ ಅವರಿಗೆ ರಾಜ್ಯ ವಕೀಲರ ಪರಿಷತ್ ನಿರ್ಬಂಧಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ತಮ್ಮ ವಾದವನ್ನು ಆಲಿಸದೇ ವಕೀಲ ವೃತ್ತಿ ಮುಂದುವರೆಸದಂತೆ ರಾಜ್ಯ ವಕೀಲರ ಪರಿಷತ್ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಮಂಜುನಾಥ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕ ಸದಸ್ಯ ಪೀಠದಲ್ಲಿ ನಡೆದಿದೆ.
ಅರ್ಜಿದಾರರು ಜನವರಿ 10 ಒಳಗೆ ತಮ್ಮ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಬೇಕು. ಇದನ್ನು ರಾಜ್ಯ ವಕೀಲರ ಪರಿಷತ್ ಪರಿಗಣಿಸಬೇಕು ಎಂದು ನ್ಯಾಯಪೀಠ ಹೇಳಿದೆ. ಪರಿಷತ್ ಮಾಡಿರುವ ಆದೇಶ ಅರ್ಜಿದಾರರಿಗೆ ಸಿವಿಲ್ ಮತ್ತು ವೃತ್ತಿ ಪರವಾಗಿ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಅವರ ವಿರುದ್ಧದ ಆರೋಪಗಳು ಗಂಭೀರವಾಗಿದೆ. ಈ ಹಿನ್ನೆಲೆ ಅವರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಬೇಕು. ಜನವರಿ 10ರೊಳಗೆ ಮಂಜುನಾಥ್ ಆಕ್ಷೇಪಣೆ ಸಲ್ಲಿಸಲು ಮತ್ತೊಂದು ಅವಕಾಶ ಕಲ್ಪಿಸಬೇಕೆಂದು ನ್ಯಾಯಪೀಠ ನಿರ್ದೇಶನ ನೀಡಿದೆ.