ಬಳ್ಳಾರಿ: ಬಳ್ಳಾರಿ ಜಿಲ್ಲಾಸ್ಪತ್ರೆ ವೈದ್ಯ ಡಾ.ಸುನೀಲ್ ಕಿಡ್ನ್ಯಾಪ್ ಪ್ರಕರಣ ಸುಖಾಂತ್ಯವಾಗಿದೆ. ವಿಚಿತ್ರವೆಂದರೆ ವೈದ್ಯನನ್ನು ಅಪಹರಿಸಿದ್ದ ಖದೀಮರು ಬಸ್ ಚಾರ್ಜ್ ಕೊಟ್ಟು ವೈದ್ಯನನ್ನು ಬಿಟ್ಟು ಕಳುಹಿಸಿದ್ದಾರೆ.
ಬಳ್ಳಾರಿ ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗದ ಡಾ. ಸುನೀಲ್ ಅವರನ್ನು ಜ.25ರಂದು ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿದ್ದರು. ಸ್ಕಾರ್ಪಿಯೋದಲ್ಲಿ ಬಂದ ದುಷ್ಕರ್ಮಿಗಳು ವೈದನನ್ನು ಅಪಹರಿಸಿಕೊಂಡು ಹೋಗಿದ್ದ ದೃಶ್ಯ ಸಿಸಿಟಿಯಿಯಲ್ಲಿ ಸೆರೆಯಾಗಿತ್ತು. ವೈದ್ಯನನ್ನು ಕಿಡ್ನ್ಯಾಪ್ ಮಾಡಿದ್ದ ಗ್ಯಾಂಗ್ 6 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಗಳ ಪತ್ತೆಯಾಗಿ ಮೂರು ತಂಡ ರಚನೆ ಮಾಡಿದ್ದರು. ವೈದ್ಯನ ಮೊಬೈಲ್ ನೆಟ್ ವರ್ಕ್ ಲೊಕೇಶನ್ ಆಧರಿಸಿ ಅಪಹರಣಕಾರರಿಗಾಗಿ ಬಲೆ ಬೀಸಿದ್ದರು. ಇದರಿಂದ ಭಯಗೊಂಡ ಕಿಡ್ನ್ಯಾಪರ್ಸ್, ವೈದ್ಯನನ್ನು ಊರೂರು ಸುತ್ತಿಸಿ ಬಳಿಕ ಬಳ್ಳಾರಿಯ ಕರಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ಬಳಿ ಬಿಟ್ಟು ಹೋಗಿದ್ದಾರೆ.
ಹೀಗೆ ಬಿಟ್ಟು ಹೋದ ಕಿಡ್ನ್ಯಾಪರ್ಸ್ ಗಳೇ ವೈದ್ಯನ ಕೈಗೆ 300 ರೂಪಾಯಿ ಬಸ್ ಚಾರ್ಜ್ ಕೊಟ್ಟು ಹೋಗಿದ್ದಾರಂತೆ. ಸದ್ಯ ಅಪಹಾರಣಕಾರರೇ ತಾವಾಗಿ ತನ್ನನು ಜೀವಂತವಾಗಿ ಬಿಟ್ಟು ಹೋದರಲ್ಲೆ ಬಚಾವ್ ಆದೆ ಎಂದು ನಿಟ್ಟಸಿರು ಬಿಟ್ಟ ವೈದ್ಯ ತನ್ನ ಸಹೋದರ ವೇಣುಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸದ್ಯ ವೈದ್ಯ ಸುರಕ್ಷಿತವಾಗಿ ಮನೆ ಸೇರಿದ್ದು, ಕಿಡ್ನ್ಯಾಪ್ ಪ್ರಕರಣ ಸುಖಾಂತ್ಯಕಂಡಿದೆ. ಆದರೆ ವೈದ್ಯನನ್ನು ಅಪಹರಿಸಿದ್ದ ಗ್ಯಾಂಗ್ ಆದರೂ ಯಾವುದು? ಕಿಡ್ನ್ಯಾಪ್ ಮಾಡಲು ಕಾರಣವೇನು? ಎಂಬುದು ಇನ್ನಷ್ಟೇ ಗೊತ್ತಗಬೇಕಿದೆ.