ಬಳ್ಳಾರಿ: ಬಳ್ಳಾರಿ ಬಿಮ್ಸ್ ನಲ್ಲಿ ಬಾಣಂತಿಯರ ಸಾವಿನ ಸರಣಿ ಮುಂದುವರೆದಿದೆ. ಕೇವಲ ಎರಡು ದಿನಗಳ ಅಂತರದಲ್ಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದಾರೆ.
25 ವರ್ಷದ ರೇಷಾ ಬಿ ಮೃತ ಬಾಣಂತಿ. ಸಿಜೇರಿಯನ್ ಬಳಿಕ ಆರೋಗ್ಯ ಸಮಸ್ಯೆಯಿಂದಾಗಿ ರೇಷ್ಮಾ ಸಾವನ್ನಪ್ಪಿದ್ದಾರೆ. ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಗ್ರಾಮದ ರೇಷ್ಮಾ ಜ.4ರಂದು ಹೆರಿಗೆಗಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ನಾರ್ಮಲ್ ಡೆಲಿವರಿಯಾಗುತ್ತದೆ ಎಂದು ಎರಡು ದಿನ ವೈದ್ಯರು ಆಸ್ಪತ್ರೆಯಲ್ಲಿಯೇ ಉಳಿಸಿಕೊಂಡಿದ್ದರು. ಬಳಿಕ ಜ.6ರಂದು ನಾರ್ಮಲ್ ಡೆಲಿವರಿ ಕಷ್ಟ. ಸಿಜೇರಿಯನ್ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಸಿಜೇರಿಯನ್ ಬಳಿಕ ರೇಷ್ಮಾ ಗಂಡುಮಗುವಿಗೆ ಜನ್ಮ ನೀಡಿದ್ದರು.
ತಾಯಿ-ಮಗು ಆರೋಗ್ಯವಾಗಿದ್ದ ಕಾರಣ ಜ.8ರಂದು ಡಿಸ್ಚಾರ್ಜ್ ಮಾಡಲಾಗಿತ್ತು. ಮನೆಗೆ ತೆರಳಿದ ಬಳಿಕ ಬಾಣಂತಿಗೆ ಆಯಾಸ, ಉಸಿರಾಟದ ಸಮಸ್ಯೆ ಶುರುವಾಗಿದ್ದು, ಜ.14ರಂದು ಮತ್ತೆ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 21ದಿನಗಳ ಕಾಲ ನಿರಂತರ ಚಿಕಿತ್ಸೆ ಬಳಿಕವೂ ರೇಷ್ಮಾ ಗುಣಮುಖರಾಗಿಲ್ಲ. ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ರೇಷ್ಮಾ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.