ಬಳ್ಳಾರಿ: ಬಳ್ಳಾರಿಯಲ್ಲಿ ಚಿನ್ನದ ವ್ಯಾಪಾರಿ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಮನೆಯಲ್ಲಿದ್ದ 5.60 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳಲಾಗಿದೆ.
ಚುನಾವಣೆ ಬಳಕೆಗೆ ಪ್ರಭಾವಿ ರಾಜಕಾರಣಿ ಹಣ ಕೊಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. 5.56 ಕೋಟಿ ರೂ. ನಗದು, 3 ಕೆಜಿ ಚಿನ್ನ, 68 ಕೆಜಿ ಕಚ್ಚಾ ಬೆಳ್ಳಿಗಟ್ಟಿ, 103 ಕೆಜಿ ಬೆಳ್ಳಿ ಆಭರಣ ಪತ್ತೆಯಾಗಿತ್ತು. ಇಷ್ಟೊಂದು ನಗದು, ಆಭರಣ ಯಾಕೆ ಸಂಗ್ರಹಿಸಿದ್ದರು ಎನ್ನುವ ಬಗ್ಗೆ ತನಿಖೆ ನಡೆಸಲಾಗಿದೆ.
ಈ ಹಣ ವ್ಯವಹಾರಕ್ಕೆ ಸೇರಿದ್ದೆ? ಅಥವಾ ಮತದಾರರಿಗೆ ಹಂಚಲು ಸಂಗ್ರಹಿಸಲಾಗಿತ್ತೇ? ಹವಾಲಾ ದಂಧೆಯಲ್ಲಿ ಹಣ ಬಳಕೆಗೆ ಇಡಲಾಗಿತ್ತೆ ಎನ್ನುವುದರ ಬಗ್ಗೆ ಅನುಮಾನ ಮೂಡಿದೆ. ಚಿನ್ನದ ವ್ಯಾಪಾರಿ ನರೇಶ್ ಸೋನಿ ಮನೆಯಲ್ಲಿ ಇಷ್ಟೊಂದು ಸಂಪತ್ತು ಪತ್ತೆಯಾಗಿದ್ದು, ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು.
ಮನೆಯಲ್ಲಿದ್ದ ನಗದಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಇಲ್ಲ. ಚಿನ್ನದ ಅಂಗಡಿ ಮಾಲೀಕ ನರೇಶ್ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಕೆಲವು ದಿನಗಳ ಹಿಂದೆ ಐಟಿ ಅಧಿಕಾರಿಗಳು ಕೆಲವು ಚಿನ್ನಾಭರಣ ಮಳಿಗೆಗಳ ಮೇಲೆ ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಆತಂಕಗೊಂಡ ನರೇಶ್ ಮಾರಾಟಕ್ಕೆ ತಂದಿದ್ದ ನಗದು ಮತ್ತು ಚಿನ್ನಾಭರಣಗಳನ್ನು ಮನೆಯಲ್ಲಿ ಸಂಗ್ರಹಿಸಿದ್ದರು ಎನ್ನಲಾಗಿದೆ.