ಬಳ್ಳಾರಿ: ರಾಜ್ಯದಲ್ಲಿ ಬಾಣಂತಿಯರ ಸಾವಿನ ಸರಣಿ ಮುಂದುವರೆದಿದೆ. ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದಾರೆ.
ಬಳ್ಳಾರಿ ಬಿಮ್ಸ್ ಆಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿದ್ದ ಐವರು ಬಾಣಂತಿಯರ ಸಾವು ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈ ಘಟನೆ ಬಳಿಕ ಬೆಳಗಾವಿ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣ ಬೆಳಕಿಗೆ ಬಂದಿತ್ತು. ಐವಿ ದ್ರಾವಣದಿಂದಲೇ ಬಾಣಂತಿಯರ ಸಾವು ಸಂಭವಿಸಿದೆ ಎಂದು ಹೇಳಲಾಗಿತ್ತು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಇದೀಗ ಮತ್ತೆ ಬಳ್ಳಾರಿ ಬಿಮ್ಸ್ ನಲ್ಲಿ ಮತ್ತೋರ್ವ ಬಾಣಂತಿ ಮೃತಪಟ್ಟಿದ್ದಾರೆ.
ಮಹಾದೇವಿ (31) ಮೃತ ಬಾಣಂತಿ. ಕುರುಗೋಡು ತಾಲೂಕಿನ ಕೋಳೂರು ಗ್ರಾಮದ ನಿವಾಸಿ ಮಹಾದೇವಿ, ಜ.25ರಂದು ಸಿಜೇರಿಯನ್ ಮೂಲಕ ಮಹಾದೇವಿಗೆ ಹೆರಿಗೆ ಮಾಡಿಸಲಾಗಿತ್ತು. ಇದೀಗ ಮಹಾದೇವಿ ಏಕಾಏಕಿ ಸಾವನ್ನಪ್ಪಿದ್ದಾರೆ.