ಶಿವಮೊಗ್ಗ: ತೀರ್ಥಹಳ್ಳಿ -ಕುಂದಾಪುರ ರಾಜ್ಯ ಹೆದ್ದಾರಿ 52 ರ ಬಾಳೆಬರೆ ಘಾಟ್ ನಲ್ಲಿ ಜೂನ್ 15 ರ ವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.
ಬಾಳೆಬರೆ ಘಾಟ್ ನಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ತಿಳಿಸಲಾಗಿದೆ.
ಶಿವಮೊಗ್ಗ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ವರದಿ ಮೇರೆಗೆ ಕಾಮಗಾರಿ ಕಾರಣದಿಂದ ಏಪ್ರಿಲ್ 22 ರಿಂದ ಜೂನ್ 6 ರ ವರೆಗೆ ವಾಹನ ಸಂಚಾರ ಸ್ಥಗಿತಗೊಳಿಸಿ, ಪರ್ಯಾಯ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು.
ಕಚ್ಚಾ ವಸ್ತುಗಳ ಕೊರತೆ ಮತ್ತು ತೌಕ್ತೆ, ಯಾಸ್ ಚಂಡಮಾರುತಗಳ ಕಾರಣದಿಂದಾಗಿ ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಜೂನ್ 15 ರವರೆಗೆ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ರಾಜ್ಯ ಹೆದ್ದಾರಿ 52 ತೀರ್ಥಹಳ್ಳಿ ಮೂಲಕ ಕುಂದಾಪುರಕ್ಕೆ ಹೋಗುವ ಲಘು ಹಾಗೂ ಮಧ್ಯಮ ವಾಹನಗಳು ತೀರ್ಥಹಳ್ಳಿ -ಕಾನಗೋಡು -ನಗರ -ಕೊಲ್ಲೂರು -ಕುಂದಾಪುರ ರಸ್ತೆ ಮೂಲಕ ತೆರಳಬೇಕಿದೆ.
ತೀರ್ಥಹಳ್ಳಿ -ಯಡೂರು -ಹುಲಿಕಲ್ -ಕುಂದಾಪುರಕ್ಕೆ ಹೋಗುವ ವಾಹನಗಳು ತೀರ್ಥಹಳ್ಳಿ -ಯಡೂರು -ಮಾಸ್ತಿಕಟ್ಟೆ -ನಗರ -ಕೊಲ್ಲೂರು -ಕುಂದಾಪುರ ರಸ್ತೆ ಮೂಲಕ ಸಂಚರಿಸಬೇಕಿದೆ.
ಶಿವಮೊಗ್ಗ -ಸಾಗರ ಕಡೆಯಿಂದ ಹೊಸನಗರದ ಮೂಲಕ ಕುಂದಾಪುರಕ್ಕೆ ಹೋಗುವ ಲಘು ಮತ್ತು ಮಧ್ಯಮ ವಾಹನಗಳು ಹೊಸನಗರ -ನಗರ -ಕೊಲ್ಲೂರು -ಕುಂದಾಪುರ ರಸ್ತೆ ಮೂಲಕ ಸಂಚರಿಸಬಹುದು.
ಶಿವಮೊಗ್ಗ -ಸಾಗರ ಹಾಗೂ ತೀರ್ಥಹಳ್ಳಿ ಕಡೆಯಿಂದ ಕುಂದಾಪುರಕ್ಕೆ ಹೋಗುವ ಭಾರಿ ಪ್ರಮಾಣದ ವಾಹನಗಳು ಬಟ್ಟೆಮಲ್ಲಪ್ಪ -ಸಾಗರ -ಗೇರುಸೊಪ್ಪ -ಹೊನ್ನಾವರ -ಕುಂದಾಪುರ ರಸ್ತೆ ಮೂಲಕ ಸಂಚರಿಸಬಹುದಾಗಿದೆ.
ಜೂನ್ 15 ರವರೆಗೆ ತೀರ್ಥಹಳ್ಳಿ ಕುಂದಾಪುರ ರಾಜ್ಯಹೆದ್ದಾರಿ 52 ರ ಬಾಳೆಬರೆ ಘಾಟ್ ನಲ್ಲಿ ಕಾಮಗಾರಿ ಕಾರಣದಿಂದ ಸಂಚಾರ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.